ಮುಂಬಯಿ ದಾಳಿ ಪ್ರಕರಣದಲ್ಲಿ ಪಾಕಿಸ್ತಾನೀಯರ ಕೈವಾಡವಿರುವುದನ್ನು 'ಮುಚ್ಚಿಡಲು' ಯಾವುದೇ ಪ್ರಯತ್ನಗಳನ್ನು ಮಾಡಬಾರದು ಎಂದು ಸಲಹೆ ನೀಡಿರುವ ಪಾಕ್ ಮಾಜಿ ಮಿಲಿಟರಿ ಆಡಳಿತಗಾರ ಪರ್ವೇಜ್ ಮುಷರಫ್, ಭಯೋತ್ಪಾದನೆಯನ್ನು ಜನರು ಬಹಿರಂಗವಾಗಿ ವಿರೋಧಿಸಬೇಕಾಗಿದೆ ಎಂದಿದ್ದಾರೆ. ಇಸ್ಲಾಮಾಬಾದಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, 'ನಾವು ಜಗತ್ತಿಗೆ ಮೋಸ ಮಾಡುವಂತಿಲ್ಲ. ಭಯೋತ್ಪಾದನೆ ಮತ್ತು ಉಗ್ರವಾದವನ್ನು ನಾವು ಬಹಿರಂಗವಾಗಿ ವಿರೋಧಿಸಬೇಕು' ಎಂದು ಹೇಳಿದ್ದಾರೆ.
ಮುಂಬಯಿ ಪ್ರಕರಣದ ಬಳಿಕ ಪಾಕಿಸ್ತಾನ ಸರಕಾರವು ವಿಶ್ವ ಸಮುದಾಯದ ಒತ್ತಡಕ್ಕೆ ಸಿಲುಕಿ ಕ್ರಮ ಕೈಗೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಮುಷರಫ್ ಈ ರೀತಿ ಹೇಳಿದ್ದಾರೆ. 'ಪಾಕಿಸ್ತಾನವೇನೂ ದುರ್ಬಲ ದೇಶವಲ್ಲ. ಇದು ಪರಮಾಣು ಸಶಕ್ತ ಮತ್ತು ಕ್ಷಿಪಣಿ ಶಕ್ತ ರಾಷ್ಟ್ರ' ಎಂದ ಮುಷರಫ್, ರಾಜಕೀಯಕ್ಕೆ ಮರಳುವ ಇರಾದೆಯಿದೆಯೇ ಎಂದು ಕೇಳಿದಾಗ, ನಕಾರಾತ್ಮಕ ಉತ್ತರ ನೀಡಿದರು.
ಕಳೆದ ವರ್ಷದ ಆಗಸ್ಟ್‌ನಲ್ಲಿ, ಚುನಾಯಿತ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಸರಕಾರದಿಂದ ವಾಗ್ದಂಡನೆ ಸಾಧ್ಯತೆ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಪಾಕಿಸ್ತಾನ ಅಧ್ಯಕ್ಷ ಪದವಿಯಿಂದ ಕೆಳಗಿಳಿದಿದ್ದ ಮುಷರಫ್ ಅವರು ಆ ಬಳಿಕ ಪ್ರಚಾರದಿಂದ ದೂರವುಳಿದಿದ್ದರು. |