ಮೂರು ದಶಕಗಳ ಹಿಂದೆ ಕೇಮರ್ ರೋಗ್ ಆಡಳಿತದಲ್ಲಿ 17 ಲಕ್ಷ ಜನರ ನರಹತ್ಯೆ ಘಟನೆಗೆ ಸಂಬಂಧಿಸಿದಂತೆ ಕುಖ್ಯಾತ ಯಾತನಾ ಶಿಬಿರದ ಮುಖ್ಯಸ್ಥನು ಕಾಂಬೋಡಿಯದ ನರಹತ್ಯೆ ನ್ಯಾಯಮಂಡಳಿಯ ಎದುರು ಮಂಗಳವಾರ ತನ್ನ ಪ್ರಥಮ ವಿಚಾರಣೆಯನ್ನು ಎದುರಿಸಿದ್ದಾನೆ.
ಡಚ್ ಎಂದೇ ಹೆಸರಾದ ಕೈಯಿಂಗ್ ಗುಯೆಕ್ ಇವ್ ನಾಮ್‌ಪೆನ್‌ನ ಎಸ್-21 ಕಾರಾಗೃಹದ ಮುಖ್ಯಸ್ಥನಾಗಿದ್ದು, ಮಾನವಜನಾಂಗದ ವಿರುದ್ಧ ಹೇಯ ಅಪರಾಧಗಳನ್ನು ಎಸಗಿದ ಆರೋಪಗಳನ್ನು ಎದುರಿಸುತ್ತಿದ್ದಾನೆ.
ಗುಂಡುನಿರೋಧಕ ಕಾರಿನಲ್ಲಿ ಸಮೀಪದ ಬಂಧನ ಕೇಂದ್ರದಿಂದ ವಿಚಾರಣೆಗೆ ಆಗಮಿಸಿದ ಡಚ್ ಸುಮಾರು 500 ಜನರು ನೆರೆದಿದ್ದ ಕೋರ್ಟ್‌ರೂಂನಲ್ಲಿ ವಿಚಾರಣೆ ಎದುರಿಸಿದ. ಎಸ್-21 ಕಾರಾಗೃಹದಿಂದ ಬದುಕುಳಿದಿರುವ 20 ಮಂದಿಯಲ್ಲಿ ವಾನ್ ನಾಥ್ ಎಂಬ ವ್ಯಕ್ತಿ ವಿಚಾರಣೆಗೆ ಹಾಜರಾಗಿದ್ದು, 'ತಾವೊಬ್ಬರೇ ನ್ಯಾಯಕ್ಕಾಗಿ ಇಚ್ಛಿಸುತ್ತಿಲ್ಲ. ಎಲ್ಲ ಕಾಂಬೋಡಿಯ ಜನರು ಸುಮಾರು 30 ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿದ್ದಾರೆಂದು' ಉದ್ಗರಿಸಿದರು.
ಕೇಮರ್ ರೋಗ್ ನಾಯಕ ಪಾಲ್ ಪಾಟ್ ಭಾವಚಿತ್ರಗಳನ್ನು ಚಿತ್ರಿಸುವ ಮತ್ತು ಕೆತ್ತುವ ಮೂಲಕ ವಾನ್ ನಾಥ್ ಕ್ರೂರ ಶಿಕ್ಷೆಗಳಿಂದ ತಪ್ಪಿಸಿಕೊಂಡು ಬದುಕುಳಿದಿದ್ದು, ಡಚ್‌ನನ್ನು ಅತ್ಯಂತ ಕ್ರೂರಿ ಎಂದು ಬಣ್ಣಿಸಿದ್ದಾನೆ. ಡಚ್ ಯಾವುದೇ ಔಪಚಾರಿಕ ತಪ್ಪೊಪ್ಪಿಗೆ ಹೇಳಿಕೆ ನೀಡದೇ ಇನ್ನುಳಿದ 4 ಪ್ರತಿವಾದಿಗಳ ರೀತಿಯಲ್ಲಿ ಕೋರ್ಟ್ ನ್ಯಾಯಾಧೀಶರ ಆದೇಶದನ್ವಯ ಅನೇಕ ಅಪರಾಧಗಳನ್ನು ಎಸಗಲಾಯಿತೆಂದು ಹೇಳಿದ. ಕ್ರೈಸ್ತಧರ್ಮಕ್ಕೆ ಮತಾಂತರಗೊಂಡ ಡಚ್ ತನ್ನ ತಪ್ಪಿಗಾಗಿ ಕ್ಷಮೆ ಯಾಚಿಸಿದ. ಅತ್ಯಂತ ಸಂಭಾವಿತ, ಕರುಣಾಶಾಲಿ ಎಂದು ಅವನನ್ನು ಕೆಲವರು ಬಣ್ಣಿಸಿದ್ದರೆ ಇನ್ನೂ ಕೆಲವರು ಡಕ್ ರಾಕ್ಷಸಸ್ವಭಾವದವನು ಎಂದು ಹೇಳಿದ್ದಾರೆ.
ಕಾರಾಗೃಹದಲ್ಲಿರುವ ಒಬ್ಬ ಕೈದಿ ಎಷ್ಟು ವರ್ಷ ಬದುಕಬೇಕೆಂದು ಡಚ್ ನಿರ್ಧರಿಸುತ್ತಿದ್ದ. ಆಡಳಿತದ ಶತ್ರುವೆಂದು ಪೂರ್ಣ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆಯೇ ಎಂಬ ವೈಯಕ್ತಿಕ ನಿರ್ಧಾರದ ಆಧಾರದ ಮೇಲೆ ಕೈದಿಗಳ ಮರಣದಂಡನೆಗೆಅವನು ಆದೇಶ ನೀಡುತ್ತಿದ್ದ. ಒಂದು ಸಾಮೂಹಿಕ ಮರಣದಂಡನೆಯಲ್ಲಿ ಕೆಲವು ಕೈದಿಗಳನ್ನು ಒಟ್ಟಿಗೆ ಕೊಲ್ಲುವಂತೆ ತನ್ನ ಬಂಟರಿಗೆ ಆದೇಶಿಸಿದ್ದ. |