ಇದೊಂದು ಕಪೋಲ ಕಲ್ಪಿತ ಕಥೆಯಂತೆ ಅನಿಸಿದರೆ ನಿಮ್ಮ ಊಹೆ ಸುಳ್ಳು. ಇದು ಪಕ್ಕಾ ನಡೆದ ಕಥೆ. ಪೈನ್ಟನ್‌ನಲ್ಲಿ ವಾಸಿಸುತ್ತಿರುವ ಬ್ರಿಟ್ ಸ್ಟೀವ್ ಸ್ಮಿತ್ ಕೊನೆಗೂ ತನ್ನ ಪ್ರೇಯಸಿಯನ್ನು ಮದುವೆಯಾಗಹೊರಟಿದ್ದಾನೆ. ಅರೆ, ಇದರಲ್ಲೇನು ವಿಶೇಷ ಅಂತ ಮೂಗು ಮುರೀಬೇಡಿ. ಇಲ್ಲೊಂದು ಇಂಟರೆಸ್ಟಿಂಗ್ ಕಥಾನಕವಿದೆ.
ಬ್ರಿಟ್ ಸ್ಟೀವ್ ಸ್ಮಿತ್ ಪೈನ್ಟನ್‌ನಲ್ಲಿ ವಾಸಿಸುಸುತ್ತಿದ್ದ. ಅದೇ ಊರಿನಲ್ಲಿ ಶಿಕ್ಷಣಕ್ಕಾಗಿ ಬಂದದ್ದು ಪ್ಯಾರಿಸ್‌ನ ಕಾರ್ಮೆನ್ ರುಯಿಝ್ ಪೆರೇಝ್. ಕಾರ್ಮೆನ್ ಹಾಗೂ ಬ್ರಿಟ್ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಲು ಶುರುಮಾಡಿ ಒಂಭತ್ತು ತಿಂಗಳಾಗುವ ಹೊತ್ತಿಗೆ ಕಾರ್ಮೆನ್ ತನ್ನ ಊರಿಗೆ ಮರಳಿದಳು. ಇತ್ತ ಸ್ಟೀವ್ ಆಕೆಯ ಬರುವಿಕೆಗೆ ಕಾದು ಕಾದು ಕೊನೆಗೂ ಆರು ವರ್ಷಗಳ ನಂತರ ಆಕೆಗೆ ಪ್ರೇಮಪತ್ರ ಬರೆಯತ್ತಾನೆ. ಆದರೆ ಆಕೆ ಆತನ ದೂರವಾಣಿ ಸಂಖ್ಯೆಗೆ ಫೋನಾಯಿಸಲು ಪತ್ರ ಹುಡುಕಿದರೆ ಪತ್ರ ಕಳೆದುಹೋಗಿತ್ತು. ಇದಾಗಿ 10 ವರ್ಷದ ನಂತರ ಈಗ ಕಳೆದುಹೋದ ಪತ್ರ ಸಿಕ್ಕಿದೆ. ಜತೆಗೆ ಕಳೆದುಹೋಗಿದ್ದ ಪ್ರಿಯಕರನೂ.
ತನ್ನ ಏಕಮಾತ್ರ ಪುತ್ರಿ ಕಾರ್ಮೆನಳ ಪ್ರೇಮಪ್ರಕರಣಕ್ಕೆ ಮಂಗಳ ಹಾಡಿದ್ದು ಆಕೆಯ ತಾಯಿ. ಅಲ್ಲಿ ಇಲ್ಲಿ ಹುಡುಕಾಡಿ ಕೊನೆಗೂ 10 ವರ್ಷದ ನಂತರ, ಕಳೆದುಹೋಗಿದ್ದ ಪತ್ರವನ್ನು ಹುಡುಕಿ ತೆಗೆದು ಮಗಳಿಗೆ ನೀಡಿ ತಾಯಿ ಪುಣ್ಯಕಟ್ಟಿಕೊಂಡಿದ್ದಾರೆ. ಇದರ ಫಲ ಈ ಇಬ್ಬರು ಪ್ರೇಮಿಗಳ ಮಿಲನ.
ಪತ್ರದಲ್ಲಿದ್ದ ಸಂಖ್ಯೆಗೆ ಕಾರ್ಮೆನ್ ಸ್ಟೀವ್‌ಗೆ ದೂರವಾಣಿ ಮಾಡಿದರೆ, ಬಕಪಕ್ಷಿಯಂತೆ ಕಾಯುತ್ತಾ ಕೂತಿದ್ದ ಸ್ಟೀವ್ ಪ್ಯಾರಿಸ್‌ಗೆ ಓಡೋಡಿ ಬಂದಿದ್ದ. ಇಬ್ಬರೂ ಏರ್‌ಪೋರ್ಟ್‌ನಲ್ಲಿ ಭೇಟಿಯಾದಾಗ ಇಬ್ಬರಿಗೂ ಸ್ವರ್ಗಕ್ಕೆ ಮೂರೇ ಗೇಣು. ಕಣ್ಣುಗಳ ಮಿಲನ. ತುಟಿಗಳ ಬೆಸೆತ...
ಸ್ಟೀವ್‌ಗೆ ತನ್ನ ಪ್ರೇಮ ಪ್ರಕರಣ ಸಿನಿಮಾದಂತೆ ಭಾಸವಾಯಿತಂತೆ. "ನನಗೆ ಈಗಲೂ ನಂಬಲಾಗುತ್ತಿಲ್ಲ. ನಾನು ಆಕೆಯನ್ನು ಮತ್ತೆ ಪಡೆಯುತ್ತೇನೆ ಎಂಬ ನಿರೀಕ್ಷೆಯನ್ನೇ ಕಳೆದುಕೊಂಡಿದ್ದೆ. ಆದರೆ ವಿಧಿ ನಮ್ಮನ್ನು ಒಟ್ಟು ಸೇರಿಸಿದೆ" ಎಂಬುದು ಸ್ಟೀವ್ ಉದ್ಗಾರ. ಆದರೆ, ಪತ್ರ ಕಳೆದುಕೊಂಡು ಹತ್ತು ವರ್ಷಗಳಾದರೂ ಕಾರ್ಮೆನ್‌ಗೆ ಮಾತ್ರ ಸ್ಟೀವ್ ಸಿಕ್ಕೇ ಸಿಗುತ್ತಾನೆ ಎಂಬ ವಿಶ್ವಾಸವಿತ್ತಂತೆ. "ಈಗ ನಾನು ಯಾವತ್ತೂ ಪ್ರೀತಿಸಲ್ಪಟ್ಟ, ಪ್ರೀತಿಸಿದ ಸ್ಟೀವ್‌ನನ್ನು ಪಡೆದಿದ್ದೇನೆ" ಎನ್ನುವಾಗ ಆಕೆಯ ಕಣ್ಣಲ್ಲಿ ಸಂತಸದ ಹನಿ.
ಅಂದಹಾಗೆ, ಈ ಸುದೀರ್ಘ ಪ್ರೇಕಹಾನಿಯ ಜೋಡಿಗಳಿಗೆ ಈಗ 42ರ ಹದಿಹರೆಯ! ಇಬ್ಬರೂ ಇದೇ ಜುಲೈ ತಿಂಗಳಲ್ಲಿ ಮದುವೆಯಾಗುತ್ತಾರಂತೆ. |