ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಟರ್ಕಿ ನಾಯಕತ್ವದ ಜತೆ ದೂರವಾಣಿ ಸಂಭಾಷಣೆ ನಡೆಸಿದ್ದು, ಟರ್ಕಿ ಅಧ್ಯಕ್ಷ ಅಬ್ದುಲ್ಲಾ ಗುಲ್ ಮತ್ತು ಪ್ರಧಾನ ಮಂತ್ರಿ ರಿಕೆಪ್ ಟೈಯಿಪ್ ಎರ್ಡೊಗನ್ ಜತೆ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಸಮಸ್ಯೆಗಳು ಸೇರಿದಂತೆ ವ್ಯಾಪಕ ವಿಷಯಗಳನ್ನು ಕುರಿತು ಚರ್ಚಿಸಿದರು.
ಒಬಾಮಾ ಅಮೆರಿಕದ ಅಧ್ಯಕ್ಷರಾದ ಬಳಿಕ ಒಬಾಮಾ ಮತ್ತು ಟರ್ಕಿ ಆಡಳಿತದ ನಡುವೆ ಪ್ರಪ್ರಥಮ ಸಂಪರ್ಕವಾಗಿದ್ದು, ಸಂಭಾಷಣೆಯ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.ಟರ್ಕಿ-ಇರಾಕ್ ಬಾಂಧವ್ಯ ಹೆಚ್ಚಳಕ್ಕೆ ಅಮೆರಿಕದ ಬೆಂಬಲ, ಮಧ್ಯಪೂರ್ವ ಶಾಂತಿ ಪ್ರಯತ್ನಗಳಿಗೆ ಸಹಕಾರ ನೀಡುವುದಕ್ಕೆ ಪ್ರಾಮುಖ್ಯತೆ ಮತ್ತು ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನೀತಿಯ ಬಗ್ಗೆ ಅಮೆರಿಕದ ಪರಾಮರ್ಶೆ ಸೇರಿದಂತೆ ಅನೇಕ ಪ್ರಸಕ್ತ ವಿಷಯಗಳನ್ನು ಒಬಾಮಾ ಮತ್ತು ಟರ್ಕಿ ನಾಯಕರು ಚರ್ಚಿಸಿದರು.
ಕಳೆದ ಕೆಲವು ವರ್ಷಗಳಿಂದ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಸಂಬಂಧ ಸುಧಾರಣೆಗೆ ಟರ್ಕಿ ನಿರ್ಣಾಯಕ ಪಾತ್ರ ವಹಿಸಿದೆ. ಕಾಬೂಲ್ ಮತ್ತು ಇಸ್ಲಾಮಾಬಾದ್ ನಡುವೆ ಭಿನ್ನಾಭಿಪ್ರಾಯ ನಿವಾರಣೆಗೆ ಕಳೆದ ಎರಡು ವರ್ಷಗಳಲ್ಲಿ ಎರಡು ಆಫ್ಘನ್-ಪಾಕ್ ಶೃಂಗಸಭೆಗಳನ್ನು ಟರ್ಕಿ ಆಯೋಜಿಸಿದೆ.
ಒಬಾಮಾ ಟರ್ಕಿಯ ಅಧ್ಯಕ್ಷ ಗುಲ್ ಮತ್ತು ಪ್ರಧಾನಿ ಎರ್ಡೊಗನ್ ಜತೆ ಸ್ನೇಹಪರ ದೂರವಾಣಿ ಸಂಭಾಷಣೆ ನಡೆಸಿದ್ದು, ಎಲ್ಲ ಮಾತುಕತೆಗಳು ವ್ಯಾಪಕ ವಿಷಯಗಳನ್ನು ಒಳಗೊಂಡಿತ್ತೆಂದು ಶ್ವೇತಭವನ ತಿಳಿಸಿದೆ. |