ಇಂಗ್ಲೆಂಡ್‌ನಲ್ಲಿ 'ನೋ ಕಿಸ್ಸಿಂಗ್' ಅಂತ ಬೋರ್ಡ್ ಹಾಕುತ್ತಿದ್ದಾರೆ!.. ಆಶ್ಚರ್ಯ ಬೇಡ. 13ರ ಪ್ರಾಯದ ತಂದೆ, 15 ವಯಸ್ಸಿನ ತಾಯಿ ಇರೋ ನಾಡಿನಲ್ಲಿ ಇಂದೆಂಥ ವಿಪರ್ಯಾಸ ಎಂದು ಹುಬ್ಬೇರಿಸಬೇಕಿಲ್ಲ. ಇದು ನಿಜ. ಉತ್ತರ ಇಂಗ್ಲೆಂಡಿನ ನಿಲ್ದಾಣಗಳಲ್ಲಿ 'ಕಿಸ್‌ಗೆ ಅವಕಾಶ ಇಲ್ಲ' ಎಂಬ ಬೋರ್ಡುಗಳು ರಾರಾಜಿಸತೊಡಗಿವೆ. ಇದಕ್ಕೆ ಕಾರಣವಿಷ್ಟೆ. ರೋಮ್ಯಾಂಟಿಕ್ ಆಗಿ ವಿದಾಯ ಕೋರುವುದು, ಪ್ರೀತಿಯ ಅಪ್ಪುಗೆ, ಚುಂಬನಗಳಿಂದಾಗಿ ಪ್ರಯಾಣಿಕರಿಗೆ ವಿಳಂಬವಾಗುತ್ತದಂತೆ!ವಾರಿಂಗ್ಟನ್ ಬ್ಯಾಂಕ್ ಕ್ವೇ ರೈಲ್ವೇ ನಿಲ್ದಾಣದ ಟ್ಯಾಕ್ಸಿ ನಿಲುಗಡೆ ಮತ್ತು ಡ್ರಾಪ್-ಆಫ್ ವಲಯದಲ್ಲಿ ಈ ಚುಂಬನ ನಿಷೇಧದ ಬೋರ್ಡುಗಳು ಕಾಣಿಸಿಕೊಂಡಿವೆ. 6.5 ಲಕ್ಷ ಪೌಂಡ್ ವೆಚ್ಚದಲ್ಲಿ ರೈಲು ನಿಲ್ದಾಣದ ಪುನರುತ್ಥಾನ ಯೋಜನೆ ಅಂಗವಾಗಿ ಈ ಬೋರ್ಡುಗಳನ್ನು ಅಳವಡಿಸಲಾಗಿದೆ ಎನ್ನುತ್ತದೆ ಈ ನಿಲ್ದಾಣದ ಉಸ್ತುವಾರಿ ವಹಿಸಿರುವ ವರ್ಜಿನ್ ಟ್ರೈನ್ಸ್ ಎಂಬ ಕಂಪನಿ.ಸ್ಥಳದಲ್ಲಿ ಗುಂಪುಗೂಡುವಿಕೆ, ಜನಜಂಗುಳಿ ತಡೆದು ವ್ಯವಸ್ಥಿತವಾಗಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬೋರ್ಡುಗಳು ಹಾಸ್ಯಾಸ್ಪದ ಅಂತ ಅನ್ನಿಸಿದರೂ ಇದರ ಹಿಂದೆ ಗಂಭೀರವಾದ ಸಂದೇಶವೊಂದಿದೆ ಎನ್ನುತ್ತಾರೆ ವಾರಿಂಗ್ಟನ್ ಚೇಂಬರ್ಸ್ ಆಫ್ ಕಾಮರ್ಸ್ ಮುಖ್ಯ ಅಧಿಕಾರಿ ಕಾಲಿನ್ ಡೇನಿಯಲ್ಸ್. ಡ್ರಾಪ್ ಆಫ್ ಪ್ರದೇಶದಲ್ಲಿ ಹೆಚ್ಚು ಹೊತ್ತು ನಿಂತು ಸಮಯ ವ್ಯಯಿಸದಂತೆ, ಮತ್ತು ಇತರ ಪ್ರಯಾಣಿಕರ ಓಡಾಟಕ್ಕೂ ತೊಂದರೆ ನೀಡದಂತೆ ಸದುದ್ದೇಶಪೂರಿತ ಸಂದೇಶವನ್ನು ಈ ರೀತಿ ನೀಡಲು ನಿರ್ಧರಿಸಿದ್ದೇವೆ ಎಂದು ವರ್ಜಿನ್ ವಕ್ತಾರರು ತಿಳಿಸಿದ್ದಾರೆ. |