ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅಮೆರಿಕ ಜತೆಗೆ `ಡಬಲ್ ಗೇಮ್' ಆಡಿದ್ದಾರೆ ಎಂಬ ಊಹಾಪೋಹಗಳಿಗೆ ಈಗ ಮತ್ತಷ್ಟು ರೆಕ್ಕೆ ಮೂಡಿದೆ. ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಷ್ಫಕ್ ಕಯಾನಿ ತಾಲಿಬಾನ್ ನಾಯಕರೊಬ್ಬರನ್ನು ಯುದ್ಧತಂತ್ರದ ಆಸ್ತಿ ಎಂದು ಬಣ್ಣಿಸಿರುವುದೇ ಈ ಅನುಮಾನಗಳಿಗೆ ಕಾರಣ.
ನ್ಯೂಯಾರ್ಕ್ ಟೈಮ್ಸ್ ವರದಿಗಾರ ಡೇವಿಡ್ ಸ್ಯಾಂಗರ್ ತಮ್ಮ `ದಿ ಇನ್‌ಹೆರಿಟೆನ್ಸ್' ಪುಸ್ತಕದಲ್ಲಿ ಇಂತಹ ಮಹತ್ವದ ಮಾಹಿತಿಗಳನ್ನು ನೀಡಿದ್ದಾರೆ. ತಾಲಿಬಾನ್‌ಗೆ ಪ್ರತಿಬಂಧ ಒಡ್ಡುವ ಅಮೆರಿಕ ನಿರ್ಧಾರದ ಸಂದರ್ಭ, ಒಂದೆಡೆ ಪಾಕಿಸ್ತಾನ ತಾಲಿಬಾನ‌್ ಚಟುವಟಿಕೆಗೂ ಅಡ್ಡಿಪಡಿಸದೆ, ಇನ್ನೊಂದೆಡೆ ತಾಲಿಬಾನನ್ನು ಬಗ್ಗುಬಡಿಯುತ್ತೇನೆಂದು ಅಮೆರಿಕದ ಅನುದಾನಗಳನ್ನು ಗುಳುಂ ಮಾಡುವ ಮೂಲಕ ಡಬಲ್ ಗೇಮ್ ಆಡುತ್ತಿದೆ ಎಂದು ಲೇಖಕರು ಈ ಪುಸ್ತಕದಲ್ಲಿ ನೇರವಾಗಿ ಆರೋಪಿಸುತ್ತಾರೆ. ಅದಕ್ಕೆ ತಮ್ಮದೇ ಆದ ಆಧಾರಗಳನ್ನೂ ನೀಡುತ್ತಾರೆ. ಹಾಗಾಗಿ ಈ ಮೊದಲೇ ಇದ್ದ ಗುಮಾನಿಯ ಹುತ್ತ ಮುಷರಫ್ ಸುತ್ತ ಬೆಳೆಯತೊಡಗಿದೆ.
ನ್ಯಾಷನಲ್ ಇಂಟಲಿಜೆನ್ಸ್ 2008ರಲ್ಲಿ ದಾಖಲಿಸಿದ ಪ್ರಕಾರ ,ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಷ್ಫಕ್ ಕಯಾನಿ ತಾಲಿಬಾನ್‌ನ ಪ್ರಮುಖ ನಾಯಕ ಮೌಲ್ವಿ ಜಲಾಲುದ್ದೀನ್ ಹಕ್ಕನಿಯನ್ನು ಯದ್ಧತಂತ್ರ ಆಸ್ತಿ ಎಂದು ಬಣ್ಣಿಸಿದ್ದರು. ಇದನ್ನು ತಿಳಿದ ಅಮೆರಿಕ, ಇದರ ತನಿಖಾ ಅಧ್ಯಯನಕ್ಕೆ ವಿಶೇಷ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿತ್ತು. ಜತೆಗೆ ಇದಕ್ಕೂ ಮೊದಲೇ, ಮುಷರಫ್ ಅಮೆರಿಕದ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂಬ ಅನುಮಾನವೂ ಅಮೆರಿಕಕ್ಕೆ ಇತ್ತು. ಅಮೆರಿಕ ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದಕ್ಕೆ ಪಾಕ್ ಕಳುಹಿಸಿದ ಅಸ್ಪಷ್ಟ ಸಹಕಾರ ಪತ್ರವೂ ಅಮೆರಿಕದ ಈ ಸಂದೇಹಕ್ಕೆ ಪುಷ್ಟಿ ನೀಡುವಂತಿತ್ತು ಎನ್ನುತ್ತಾರೆ ಲೇಖಕರು.
ಸೋವಿಯತ್ ಯುದ್ಧ ವಿರೋಧಿಯಾಗಿರುವ ಉಗ್ರವಾದಿ ಹಕ್ಕನಿ ಪಾಕಿಸ್ತಾನದ ಬುಡಕಟ್ಟು ಪ್ರದೇಶವಾದ ವಾಜಿರಿಸ್ತಾನ್‌ನ ತಾಲಿಬಾನ್ ಗುಂಪಿನ ನಾಯಕತ್ವವನ್ನು ವಹಿಸಿದ್ದು, ಆತನೇ ಈ ಉಗ್ರವಾದಿಗಳಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ತಂತ್ರವನ್ನು ಆರಂಭಿಸಿದ. ವರದಿಗಾರ ಸಂಗ್ರಹಿಸಿದ ಮೂಲಗಳು ಹೇಳುವ ಪ್ರಕಾರ, ಅಮೆರಿಕ ಕದ್ದಾಲಿಸಿದ ಟೆಲಿಫೋನ್ ಟೆಲಿಫೋನ್ ಸಂಭಾಷಣೆ ಹೀಗಿತ್ತು. `ನಾವು ನಿಮ್ಮ ಪ್ರದೇಶಕ್ಕೆ ಇನ್ನು ಕೆಲವೇ ದಿನಗಳಲ್ಲಿ ದಾಳಿ ಮಾಡುವವರಿದ್ದೇವೆ. ಅಲ್ಲಿ ಯಾವುದಾದರೂ ಮಹತ್ವದವುಗಳಿವೆಯೇ?' ಹೀಗೆ ಹೇಳಿದ ಕೆಲವೇ ದಿನಗಳಲ್ಲಿ ಕಾಬುಲ್‌ನಲ್ಲಿರುವ ಇಂಡಿಯನ್ ಎಂಬಸಿಯ ಮೇಲೆ ಬಾಂಬ್ ದಾಳಿಯಾಗಿತ್ತು. ಮೂಲಗಳ ಪ್ರಕಾರ ಕದ್ದಾಲಿಸಿದ ದೂರವಾಣಿ ಸಂಖ್ಯೆ 1-800-ಹಕ್ಕನಿ ಎಂದಿತ್ತು.
ಮುಷರಫ್ ನಿರಾಕರಣೆ: ಮುಷರಫ್ ಮಾತ್ರ ಈ ಪುಸ್ತಕದಲ್ಲಿರುವ ಹೇಳಿಕೆಗಳನ್ನು ಅಲ್ಲಗಳೆಯುತ್ತಾರೆ. ಮೊದಲು ನಿಮ್ಮ ಹೇಳಿಕೆಗಳನ್ನು ಸರಿಪಡಿಸಿ. ನಾನು ಯಾವತ್ತೂ ಡಬಲ್ ಗೇಮ್ ಆಡಿಲ್ಲ. ಈ ಹೇಳಿಕೆಗಳ ಹಿಂದೆ ದೊಡ್ಡ ಸಂಚೇ ಇದೆ. ಪಾಕಿಸ್ತಾನವನ್ನು ಹಾಗೂ ಪಾಕ್ ಸೈನ್ಯವನ್ನು ದುರ್ಬಲಗೊಳಿಸಲು ಮಾಡಿರುವ ವ್ಯವಸ್ಥಿತ ಪಿತೂರಿ ಇದು ಎಂದು ಮುಷರಫ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. |