ಮುಂಬೈ ದಾಳಿಗೆ ಸಂಬಂಧಿಸಿದ ಐವರು ಮುಖ್ಯ ಪಾಕಿಸ್ತಾನಿ ಶಂಕಿತರು ಎಲ್ಲಿದ್ದಾರೆ ಮತ್ತವರ ಸ್ಥಿತಿಗತಿ ಏನಾಗಿದೆ ಎನ್ನುವುದು ನಿಗೂಢವಾಗಿ ಉಳಿದಿದೆ.
ಮುಂಬೈ ದಾಳಿಗೆ ಸಂಬಂಧಪಟ್ಟಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ಬೊಗಳೆ ಬಿಡುತ್ತಿರುವುದು ಇದರಿಂದ ರುಜುವಾತಾಗಿದೆ. ಇದುವರೆಗೆ ಫೆಡರಲ್ ತನಿಖಾ ದಳದ ವಶಕ್ಕೆ ಭಯೋತ್ಪಾದನೆ ನಿಗ್ರಹ ನ್ಯಾಯಾಧೀಶರು ನಾಮಕಾವಸ್ಥೆ ಕ್ರಮವಾಗಿ ಕೇವಲ ಏಕೈಕ ಆರೋಪಿಯನ್ನು ಒಪ್ಪಿಸಿದ್ದಾರೆ.
ಭಯೋತ್ಪಾದನೆ ನಿಗ್ರಹ ಕೋರ್ಟ್ ನ್ಯಾಯಾಧೀಶ ಸಾಖಿ ಮುಹಮದ್ ಕಾಹುಟ್ ಅವರು, ಲಷ್ಕರೆ ತೊಯಿಬಾ ಕಾರ್ಯಕರ್ತ ಹಮದ್ ಅಮಿನ್ ಸಾದಿಕ್ ಅವರನ್ನು ಎಫ್‌ಐಎ ಕಸ್ಟಡಿಗೆ 15ದಿನಗಳ ಕಾಲ ಒಪ್ಪಿಸಿದ್ದು, ಮುಂಬೈ ಘಟನೆಯ ಹಿಂದಿನ 'ಮುಖ್ಯ ನಿರ್ವಾಹಕ'ಎಂದು ಪಾಕಿಸ್ತಾನ ಅಧಿಕಾರಿಗಳು ಬಣ್ಣಿಸಿದ್ದಾರೆ. ಆದರೆ ಇನ್ನಿತರ ಐದು ಮಂದಿ ಸ್ಥಿತಿಗತಿ ಏನಾಯಿತು ಮತ್ತು ಅವರು ಎಲ್ಲಿದ್ದಾರೆಂಬ ಬಗ್ಗೆ ಅಧಿಕೃತ ಮಾಹಿತಿಯಂತೂ ಇಲ್ಲವೇ ಇಲ್ಲ. ಒಳಾಡಳಿತ ಸಚಿವಾಲಯದ
ಮುಖ್ಯಸ್ಥ ರೆಹ್ಮಾನ್ ಮಲಿಕ್ ಐವರು ಉಗ್ರರು ಅಧಿಕಾರಿಗಳ ಕಸ್ಟಡಿಯಲ್ಲಿದ್ದಾರೆಂದು ಹೇಳುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಶಂಕಿತರ ಹೆಸರನ್ನು ಮಲಿಕ್ ಹೇಳದಿದ್ದರೂ, ಅವರಲ್ಲಿ ಲಷ್ಕರೆ ತೊಯಿಬಾ ಉಗ್ರರಾದ ಜಾಕಿರ್ ರೆಹ್ಮಾನ್ ಲಖ್ವಿ ಮತ್ತು ಜರಾರ್ ಶಾ ಅವರ ಹೆಸರು ಇವೆಯೆಂದು ಮೂಲಗಳು ಹೇಳಿವೆ.
ಇಸ್ಲಾಮಾಬಾದ್‌ಗೆ ಭಾರತ ಸಲ್ಲಿಸಿರುವ ಮುಂಬೈ ದಾಳಿಯ ಆರೋಪಿಗಳ ಪಟ್ಟಿಯಲ್ಲಿ ಅವರಿಬ್ಬರ ಹೆಸರಿದೆಯೆಂದು ವರದಿಯಾಗಿತ್ತು. ರಾವಲ್ಪಿಂಡಿಯಲ್ಲಿ ಬಿಗಿ ಭದ್ರತೆಯ ಅಡಿಯಾಲ ಜೈಲಿನಲ್ಲಿ ಸ್ಥಾಪಿಸಿರುವ ತಾತ್ಕಾಲಿಕ ಕೋರ್ಟ್‌ನಲ್ಲಿ ಸಾದಿಕ್‌ನನ್ನು ಎಫ್‌ಐಎ ಕಸ್ಟಡಿಗೆ ಒಪ್ಪಿಸಲಾಯಿತು. ಸಾದಿಖ್‌ನನ್ನು ಸೆರೆಮನೆಗೆ ಶಸಸ್ತ್ರ ವಾಹನದಲ್ಲಿ ತರಲಾಯಿತು ಮತ್ತು ಮುಖವಾಡದಿಂದ ಅವನ ಮುಖ ಮುಚ್ಚಲಾಗಿತ್ತು. |