ಕುಖ್ಯಾತ ಭಯೋತ್ಪಾದಕ ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದ ಗಡಿಭಾಗದಲ್ಲಿನ ನಗರವೊಂದರಲ್ಲಿ ವಾಸಿಸುತ್ತಿರುವ ಸಾಧ್ಯತೆಯಿದೆ ಎಂದು ಅಮೆರಿಕಾ ಸ್ಯಾಟಲೈಟ್ ಚಿತ್ರಗಳು ಬಹಿರಂಗಪಡಿಸಿವೆ.
ಅಮೆರಿಕಾ ಮೂಲದ ಭೂಗೋಳ ಶಾಸ್ತ್ರಜ್ಞ ಥೋಮಸ್ ಗಿಲ್ಲೆಸ್ಪಿ ನೇತೃತ್ವದ ಸಂಶೋಧನಾ ತಂಡವೊಂದು ಈ ವಿಚಾರವನ್ನು ಬಹಿರಂಗಪಡಿಸಿದೆ. ಪಾಕಿಸ್ತಾನ ಗಡಿಭಾಗದ ನಗರ ಪರಚಿನಾರ್ ಎಂಬಲ್ಲಿ ಲಾಡೆನ್ ವಾಸವಾಗಿರಬಹುದು ಎಂದು ರಾತ್ರಿ ಹೊತ್ತಿನ ಸ್ಯಾಟಲೈಟ್ ಛಾಯಾಚಿತ್ರಗಳು ಮತ್ತು ಇತರ ತಂತ್ರಜ್ಞಾನಗಳ ಸಹಾಯದಿಂದ ಥೋಮಸ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಪರಚಿನಾರ್ ಪಾಕಿಸ್ತಾನ ಗಡಿಯಿಂದ ಕೇವಲ 12 ಮೈಲು ದೂರದಲ್ಲಿದೆ. ಅಧ್ಯಯನದ ಪ್ರಕಾರ ಈ ಪ್ರದೇಶದಲ್ಲಿ ಮೂರು ಕಟ್ಟಡಗಳು ಲಾಡೆನ್ ಇರಬಹುದೆಂಬುದನ್ನು ಬೊಟ್ಟು ಮಾಡಿ ತೋರಿಸುತ್ತಿವೆ.
ಈ ಹಿಂದೆ ಭೂಗತರನ್ನು, ಕುಖ್ಯಾತ ಕ್ರಿಮಿನಲ್‌ಗಳನ್ನು ಪತ್ತೆ ಹಚ್ಚಲು ಉಪಯೋಗಿಸಿದ ತಂತ್ರಗಳನ್ನೇ ಇಲ್ಲಿ ಬಳಸಲಾಗಿದೆ. ಸಂಬಂಧಿತ ಪ್ರದೇಶಗಳ ಸ್ಯಾಟಲೈಟ್ ಚಿತ್ರಗಳು, ರಾತ್ರಿ ಹೊತ್ತು ವಿದ್ಯುತ್ ಬಳಕೆ ಮತ್ತು ಜನಸಾಂದ್ರತೆ ಪತ್ತೆ ಹಚ್ಚುವ ವಿಧಾನಗಳ ಮೂಲಕ ಪತ್ತೆದಾರಿಕೆ ನಡೆಸಲಾಗಿದೆ. ಇದಕ್ಕಾಗಿ ಲಾಡೆನ್‌ನ ಈ ಹಿಂದಿನ ಬದುಕಿನ ರೀತಿ, ಚಹರೆ, ನಡವಳಿಕೆಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ತಾಳೆ ಹಾಕಲಾಗಿದೆ.
ಲಾಡೆನ್ ಸುಮಾರು 6.4 ಅಡಿಗಳಷ್ಟು ಎತ್ತರವಿದ್ದು, ಆತನಿಗೆ ನಿಯಮತ ಡಯಾಲಿಸಿಸ್ ಅಗತ್ಯವಿದೆ. ಅದಕ್ಕಾಗಿ ಯಂತ್ರ ಬಳಸಬೇಕಾಗಿರುವುದರಿಂದ ವಿದ್ಯುತ್ ಅನಿವಾರ್ಯ. ತನ್ನ ವಾಸಸ್ಥಾನವನ್ನು ಗಿಡ-ಮರಗಳಿಂದ ಕಾಣದಂತೆ ಮಾಡುವುದು ಮತ್ತು ಭಾರೀ ಭದ್ರತೆಯೊಂದಿಗೆ ಆತ ಏಕಾಂಗಿ ಜೀವನ ನಡೆಸುತ್ತಿರಬಹುದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ನಡೆಸಲಾಗಿತ್ತು.
ಈ ಸಂಬಂಧ ಈಗಾಗಲೇ ಎಫ್‌ಬಿಐಗೆ ಮಾಹಿತಿ ನೀಡಲಾಗಿದ್ದು ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
|