ವಾಯವ್ಯ ಮುಂಚೂಣಿ ಪ್ರಾಂತ್ಯದ ಪ್ರಕ್ಷುಬ್ಧಪೀಡಿತ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸುವ ಯತ್ನವಾಗಿ ತಾಲಿಬಾನ್‌ಗೆ ಮಣಿದಿರುವ ಪಾಕಿಸ್ತಾನ ಅಲ್ಲಿ ಷರಿಯತ್ ಕಾನೂನು ಜಾರಿಗೆ ಒಪ್ಪಿಕೊಂಡ ಬಳಿಕ, ತಾಲಿಬಾನ್ ಭಾರತದ ಮೇಲೆ ಗುರಿಯಿರಿಸಲು ಯೋಜಿಸಿವೆಯೆಂದು ಗುಪ್ತಚರ ಮೂಲಗಳು ತಿಳಿಸಿವೆ.
ಭಾರತದ ಗಡಿಗೆ ಸಮೀಪದಲ್ಲೇ ಇರುವ ತಾಲಿಬಾನ್ ಭಾರತಕ್ಕೆ ಒಡ್ಡಿರುವ ಬೆದರಿಕೆ ಬಗ್ಗೆ ಮೂಲಗಳು ದೃಢಪಡಿಸಿವೆ. ಭಾರತದ ಪಾಶ್ಚಿಮಾತ್ಯ ಸಂಸ್ಕೃತಿಯ ನಗರಗಳ ಮೇಲೆ ದಾಳಿ ಮಾಡಲು ತಾಲಿಬಾನ್ ಯೋಜಿಸಿದೆಯೆಂದು ಮೂಲಗಳು ಬಹಿರಂಗಪಡಿಸಿವೆ.ಆದಾಗ್ಯೂ ಬೆದರಿಕೆಯ ಸ್ವರೂಪ, ನಿರ್ದಿಷ್ಟ ಗುರಿ, ವೇಳೆಯ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿ ಲಭ್ಯವಾಗಿಲ್ಲ.
ಪಾಕಿಸ್ತಾನದ ಪ್ರಸಕ್ತ ಭದ್ರತಾ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿದೇಶಿ ದೂತಾವಾಸ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಆಸಕ್ತಿ ಹೊಂದಿರುವ ಭಾರತದ ಇತರೆ ಸ್ಥಳಗಳಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಪಾಕಿಸ್ತಾನದ ಹೊರಗೆ ಕಾರ್ಯಾಚರಿಸುತ್ತಿರುವ ತಾಲಿಬಾನ್ ಭಾರತ ಮತ್ತು ಅಮೆರಿಕವಲ್ಲದೇ ಆತಿಥ್ಯ ರಾಷ್ಟ್ರಕ್ಕೆ ಕೂಡ ಬೆದರಿಕೆಯಾಗಿದೆ ಎಂದು ಅಮೆರಿಕ ಸೋಮವಾರ ತಿಳಿಸಿದೆ.
ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಪ್ರತಿನಿಧಿ ರಿಚರ್ಡ್ ಹಾಲ್‌ಬ್ರೂಕ್ ಈ ವಲಯದಲ್ಲಿ ಸ್ಫೋಟನಾಕಾರಿ ಪರಿಸ್ಥಿತಿ ಕುರಿತು ಚರ್ಚೆಗೆ ನವದೆಹಲಿಗೆ ಆಗಮಿಸಿ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್, ವಿದೇಶಾಂಗ ಕಾರ್ಯದರ್ಶಿ ಶಿವಶಂಕರಮೆನನ್ ಅವರನ್ನು ಭೇಟಿಯಾಗಿದ್ದರು.
ಭೇಟಿಯ ಕಾಲದಲ್ಲಿ, ಪಾಕಿಸ್ತಾನದ ಹೊರಗೆ ಕಾರ್ಯಾಚರಿಸುತ್ತಿರುವ ಭಯೋತ್ಪಾದನೆ ಇಡೀ ವಲಯಕ್ಕೆ ಮಾತ್ರವಲ್ಲದೇ ಜಗತ್ತಿಗೇ ಬೆದರಿಕೆಯೊಡ್ಡಿದೆ ಎಂದು ಭಾರತದ ಕಡೆಯಿಂದ ಹಾಲ್‌ಬ್ರೂಕ್ ಅವರಿಗೆ ಮನದಟ್ಟು ಮಾಡಲಾಯಿತೆಂದು ಗೊತ್ತಾಗಿದೆ.
ತಾಲಿಬಾನ್ ಆಂದೋಳನದ ನೇತೃತ್ವ ವಹಿಸಿರುವುದು ಮುಲ್ಲಾ ಮಹಮದ್ ಓಮರ್. ಮುಲ್ಲಾ ಒಮರ್ ಮೂಲ ಕಮಾಂಡರ್‌ಗಳು ಸಣ್ಣ ಘಟಕದ ಮಾಜಿ ಮಿಲಿಟರಿ ಕಮಾಂಡರ್‌ಗಳು ಮತ್ತು ಮದ್ರಸಾ ಶಿಕ್ಷಕರ ಸಂಯೋಗ.
ತಾಲಿಬಾನ್ ಕಾರ್ಯಕರ್ತರು ಪಾಕಿಸ್ತಾನ ಇಸ್ಲಾಮಿಕ್ ಧಾರ್ಮಿಕ ಶಾಲೆಯಲ್ಲಿ ಓದಿರುವ ಆಫ್ಘನ್ ನಿರಾಶ್ರಿತರು. ಇದು ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿದೆ.
|