ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಆಫ್ಘಾನಿಸ್ತಾನಕ್ಕೆ 17,000 ಯೋಧರ ಪಡೆಯನ್ನು ನಿಯೋಜಿಸಲು ಅನುಮತಿಸುವುದರೊಂದಿಗೆ ಪ್ರಪ್ರಥಮ ಪ್ರಮುಖ ಮಿಲಿಟರಿ ಕ್ರಮ ಕೈಗೊಂಡಿದ್ದಾರೆ.
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರಗಾಮಿಗಳ ಹಾವಳಿ ತೀವ್ರಗೊಂಡಿದ್ದು, ಅಲ್ಲಿನ ಪರಿಸ್ಥಿತಿ ಹದಗೆಟ್ಟಿರುವುದರಿಂದ ಅಲ್ಲಿ ಸ್ಥಿರತೆ ಸ್ಥಾಪಿಸಲು ಹೆಚ್ಚುವರಿ ಪಡೆಗಳು ಅವಶ್ಯಕೆವೆಂದು ಅವರು ಹೇಳಿದ್ದಾರೆ.
ನಮ್ಮ ಸೇನಾಪಡೆಯನ್ನು ಅಪಾಯದ ನಿರ್ಮೂಲನೆಗೆ ನಿಯೋಜಿಸುವ ನಿರ್ಧಾರಕ್ಕಿಂತಲೂ ಹೆಚ್ಚಿನ ಕರ್ತವ್ಯವಿಲ್ಲ ಎಂದು ಒಬಾಮಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಸ್ಫೋಟನಾಕಾರಿ ಪರಿಸ್ಥಿತಿ ಉದ್ಭವಿಸಿದ್ದು, ತುರ್ತು ಗಮನ ಮತ್ತು ಕ್ಷಿಪ್ರ ಕ್ರಮ ಅವಶ್ಯಕವಾಗಿರುವುದು ತಿಳಿದಿದ್ದು ತಾವು ಈ ಕೆಲಸ ಮಾಡಿದ್ದಾಗಿ ಅವರು ಹೇಳಿದರು.
ಆಫ್ಘಾನಿಸ್ತಾನದಲ್ಲಿರುವ ಅಮೆರಿಕದ ಕಮಾಂಡರ್ ಜನರಲ್ ಡೇವಿಡ್ ಮೆಕ್ಕೀರನ್ ಅವರು 30,000 ಪಡೆಗಳನ್ನು ಕಳಿಸಬೇಕೆಂಬ ಮನವಿ ಮಾಡಿದ್ದರಿಂದ ಅದಕ್ಕೆ ಪ್ರತಿಕ್ರಿಯೆಯಾಗಿ ನಿಯೋಜನೆ ಆದೇಶ ನೀಡಲಾಗಿದೆ ಎಂದು ಒಬಾಮಾ ಹೇಳಿದರು.ತಾಲಿಬಾನ್ ಮತ್ತು ಅಲ್ ಖೈದಾ ಉಗ್ರಗಾಮಿಗಳ ಭಯೋತ್ಪಾದಕತೆ ಬಲಿಷ್ಠವಾಗುತ್ತಿದ್ದು, ಪೂರ್ವ ಮತ್ತು ದಕ್ಷಿಣ ಭಾಗಗಳಿಂದ ಕಾಬೂಲ್‌ನ ಪಶ್ಚಿಮ ಭಾಗ ಮತ್ತಿತರ ಪ್ರದೇಶಗಳಿಗೆ ವಿಸ್ತರಿಸಿದ್ದಾರೆ. ಇರಾಕ್ ಭದ್ರತಾ ಪರಿಸ್ಥಿತಿ ಸುಧಾರಣೆಯಾದ ಬಳಿಕ, ಅಮೆರಿಕವು ಆಫ್ಘಾನಿಸ್ತಾನದ ಬಂಡುಕೋರ ಕೃತ್ಯಗಳ ಕರೆ ಗಮನಹರಿಸಿದೆ. |