ತಾಲಿಬಾನ್ ಹಿಡಿತದಲ್ಲಿರುವ ಸ್ವಾಟ್ ಕಣಿವೆಯಲ್ಲಿ ಶರಿಯತ್ ಕಾನೂನು ಜಾರಿಗೆ ಸಮ್ಮತಿ ಸೂಚಿಸಿ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿರುವ ಪಾಕ್ ಇದೀಗ, ಸಂಪೂರ್ಣ ಶಾಂತಿ ಸ್ಥಾಪನೆಯಾದ ಬಳಿಕ ಶರಿಯತ್ ಕಾನೂನು ಜಾರಿಗೆ ತರುವ ಆದೇಶಕ್ಕೆ ಅಂಕಿತ ಹಾಕುವುದಾಗಿ ಅಧ್ಯಕ್ಷ ಅಸಿಫ್ ಜರ್ದಾರಿ ತಿಳಿಸಿದ್ದಾರೆ.
ಶರಿಯತ್ ಕಾನೂನಿಗೆ ಸಹಿ ಹಾಕಲು ಇಸ್ಲಾಮಿಕ್ ಉಗ್ರಗಾಮಿಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಬೇಕಾಗುತ್ತದೆಂದು ಜರ್ದಾರಿ ವಕ್ತಾರ ತಿಳಿಸಿದ್ದಾರೆ. ಏತನ್ಮಧ್ಯೆ, ಸ್ಥಳೀಯ ತಾಲಿಬಾನ್ ಪರ ಧರ್ಮಗುರು ಸೂಫಿ ಮಹಮದ್ ಸ್ವಾಟ್ ಕಣಿವೆಗೆ ಆಗಮಿಸಿ, ಒಪ್ಪಂದಕ್ಕೆ ಸಮ್ಮತಿಸುವಂತೆ ಸ್ಥಳೀಯ ತಾಲಿಬಾನ್ ನಾಯಕರಿಗೆ ಮನದಟ್ಟು ಮಾಡಲು ಯತ್ನಿಸಿದ್ದಾರೆ. ಆದರೆ ಶತ್ರುತ್ವವನ್ನು ಕಾಯಂ ಅಂತ್ಯಗೊಳಿಸಿ ಶಾಂತಿ ಸ್ಥಾಪಿಸಲು ದಾಖಲೆಯನ್ನು ಪರಿಶೀಲಿಸುವುದಾಗಿ ತಾಲಿಬಾನ್ ಹೇಳಿದೆ.
ಸ್ವಾಟ್ ಕಣಿವೆಯಲ್ಲಿ ತಾಲಿಬಾನ್‌ನ ಪ್ರಸಕ್ತ ಮುಖ್ಯಸ್ಥನಾಗಿರುವ ಮೌಲಾನ್ ಫಜಲುಲ್ಲಾ ಮಾವ ಸೂಫಿ ಮಹಮದ್. ಅವರ ಟಿಎನ್‌ಎಂಎಂ ಪಕ್ಷವು ಶರಿಯತ್ ಕಾನೂನು ಅನುಷ್ಠಾನದ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಿದೆ. ಈ ವಲಯದ ಸ್ಥಳೀಯರು ಒಪ್ಪಂದವನ್ನು ಸ್ವಾಗತಿಸಿದ್ದಾರೆ. |