ನೂರಾರು ಬ್ರಿಟನ್ ಮತ್ತು ಆಫ್ಘನ್ ಯೋಧರು ಆಫ್ಘಾನಿಸ್ತಾನದಲ್ಲಿ ಸುಮಾರು 50 ಮಿಲಿಯನ್ ಡಾಲರ್ ಮೌಲ್ಯದ ಹೆರಾಯಿನ್ ಮತ್ತು ಮಾದಕವಸ್ತು ತಯಾರಿಕೆ ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ. ನಾಲ್ಕು ಮಾದಕವಸ್ತು ಕಾರ್ಖಾನೆಗಳ ಮೇಲೆ ಸುಮಾರು 700 ಯೋಧರು ದಾಳಿ ಮಾಡಿದರೆಂದು ವರದಿಯಾಗಿದೆ.
ಫೆ.6ರಿಂದ ಫೆ.16ರವರೆಗೆ ನಡೆದ 'ಆಪರೇಷನ್ ಡೀಸೆಲ್' ಹೆಸರಿನ ಕಾರ್ಯಾಚರಣೆಯಲ್ಲಿ ಸುಧಾರಿತ ಬಾಂಬ್ ತಯಾರಿಕೆ ಸೌಲಭ್ಯಗಳ ಮೇಲೆ ಕೂಡ ದಾಳಿ ನಡೆಸಿದೆ. ಆಫ್ಘಾನಿಸ್ತಾನದಲ್ಲಿ ಕಾರ್ಯಾಚರಣೆ ಯಶಸ್ಸು ಮಾದಕವಸ್ತು ವ್ಯಾಪಾರದ ವಿರುದ್ಧ ಹೋರಾಟಕ್ಕೆ ಗಮನಾರ್ಹ ಉತ್ತೇಜನ ನೀಡಲಿದೆಯೆಂದು ಹೇಳಲಾಗಿದೆ.
'ನಮ್ಮ ಕರ್ತವ್ಯನಿಷ್ಠ, ವೃತ್ತಿಪರ ಪಡೆಗಳು ಶತ್ರುಗಳ ವಿರುದ್ಧ ಹೋರಾಟದಲ್ಲಿ ಯಶಸ್ಸು ಹೊಂದಿದೆ. ಅವರ ಶೌರ್ಯದಿಂದ ಹೆಲ್ಮಾಂಡ್ ಬಹುತೇಕ ಭಾಗ ಶತ್ರುಗಳ ಹಿಡಿತದಿಂದ ಮುಕ್ತವಾಗಿದ್ದು, ಪ್ರಾಂತ್ಯಕ್ಕೆ ಭದ್ರತೆ ಮತ್ತು ಆಡಳಿತ ನಿಯೋಜನೆಗೆ ಅವಕಾಶ ಕಲ್ಪಿಸಿದೆಯೆಂದು' ರಕ್ಷಣಾ ಕಾರ್ಯದರ್ಶಿ ಹಟ್ಟನ್ ತಿಳಿಸಿದ್ದಾರೆ.
ಸುಮಾರು 50 ಮಿಲಿಯನ್ ಮೌಲ್ಯದ ಮಾದಕಪದಾರ್ಥದ ಸ್ವಾಧೀನದಿಂದ ತಾಲಿಬಾನ್‌ಗೆ ನಿಧಿಯ ಕೊರತೆ ಉಂಟಾಗಿ, ಬ್ರಿಟನ್ ಬೀದಿಗಳಲ್ಲಿ ಮಾದಕವಸ್ತು ಪ್ರಸರಣ ಮತ್ತು ಭಯೋತ್ಪಾದಕತೆ ನಾಶವಾಗುತ್ತದೆಂದು ಅವರು ಆಶಿಸಿದ್ದಾರೆ.
ಪಡೆಗಳು 1295 ಕೇಜಿ ಅಪೀಮನ್ನು ನಾಶಪಡಿಸಿದ್ದು, ಅದು ಹೆರಾಯಿನ್‌ಗಿಂತ ಬೆಲೆಬಾಳುತ್ತಿದ್ದು, 6 ಮಿಲಿಯನ್ ಡಾಲರ್ ಮೌಲ್ಯದ್ದೆಂದು ಅಂದಾಜು ಮಾಡಲಾಗಿದೆ. ಹೆರಾಯಿನ್ ಉತ್ಪಾದನೆಗೆ ಬಳಸುವ ಅಮೋನಿಯಂ ಕ್ಲೋರೈಡ್, ಅಸಿಟಿಕ್ ಅನ್‌ಹೈಡ್ರೈಡ್, ಸೋಡಿಯಂ ಕ್ಲೋರೈಡ್ ಮತ್ತು ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಮುಂತಾದ 50 ಮಿಲಿಯನ್ ಮೌಲ್ಯದ ರಾಸಾಯನಿಕ ವಸ್ತುಗಳು ಕೂಡ ಪತ್ತೆಯಾಗಿವೆ.
ಿದರ ಜತೆಗೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಸೇರಿದಂತೆ ಬಂದೂಕುಗಳು, ಮೆಷಿನ್ ಗನ್ನುಗಳು, ಮೂರು ರಾಕೆಟ್ ಲಾಂಚರ್ ಮತ್ತು ಹೆಚ್ಚುವರಿ ಸಾಮಗ್ರಿಗಳನ್ನು ಮತ್ತು ಆತ್ಮಾಹುತಿ ದಾಳಿಗೆ ವಿನ್ಯಾಸಗೊಳಿಸಿದ ಮೋಟರ್ ಬೈಕ್‌ವೊಂದನ್ನು ಕೂಡ ಪಡೆಗಳು ವಶಕ್ಕೆ ತೆಗೆದುಕೊಂಡಿವೆ. ತಾಲಿಬಾನ್ ಮತ್ತು ಮಾದಕವಸ್ತು ವ್ಯಾಪಾರದ ನಡುವೆ ಸಖ್ಯ ಖಚಿತವಾಗಿ ಸಾಬೀತಾಗಿದ್ದು, ಮಾದಕವಸ್ತು ಉತ್ಪಾದನೆಯಿಂದ ಸಿಗುವ ಆದಾಯ ಉಗ್ರಗಾಮಿ ಚಟುವಟಿಕೆಗೆ ಆರ್ಥಿಕ ನೆರವನ್ನು ನೇರವಾಗಿ ಒದಗಿಸುತ್ತಿತ್ತೆಂದು ಹೆಲ್ಮಾಂಡ್ ಕಾರ್ಯಪಡೆಯ ಕಮಾಂಡರ್ ಬ್ರಿ.ಗೋರ್ಡನ್ ಮೆಸೆಂಜರ್ ತಿಳಿಸಿದ್ದಾರೆ.
|