ಪಾಕಿಸ್ತಾನವು ತಾಲಿಬಾನ್ ಸಂಘಟನೆ ಜತೆ ಸ್ವಾಟ್ ಕಣಿವೆ ಸೇರಿದಂತೆ ಪ್ರಕ್ಷುಬ್ಧ ವಾಯವ್ಯ ಗಡಿ ಪ್ರಾಂತ್ಯದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಅಂತಾರಾಷ್ಟ್ರೀಯ ವಲಯಗಳಲ್ಲಿ ಆತಂಕದ ಕಾರ್ಮೋಡ ಕವಿದಿದೆ.
ಈ ವಿಷಯದ ಬಗ್ಗೆ ಇಸ್ಲಾಮಾಬಾದ್‌ನಿಂದ ಸಂಪೂರ್ಣ ವಿವರ ಕೇಳುವುದಾಗಿ ಅಮೆರಿಕ ತಿಳಿಸಿದೆ.'ನಾವು ಈ ವಿಷಯ ಕುರಿತು ಚರ್ಚಿಸುತ್ತಿದ್ದು, ಅವರ ವಿವರಣೆ ಏನಿರುತ್ತದೆಂಬ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ' ಎಂದು ವಿದೇಶಾಂಗ ಇಲಾಖೆಯ ವಕ್ತಾರ ಗೋರ್ಡನ್ ಡುಗುಯಿಡ್ ವರದಿಗಾರರಿಗೆ ತಿಳಿಸಿದರು.
ಶಾಂತಿ ಒಪ್ಪಂದದ ರೀತ್ಯ ಪಾಕಿಸ್ತಾನವು ಶರಿಯತ್ ಕಾನೂನು ಜಾರಿಗೆ ಒಪ್ಪಿಗೆ ನೀಡಿದ್ದು, ತಾಲಿಬಾನ್ ಉಗ್ರಗಾಮಿಗಳು 10 ದಿನಗಳ ಕದನವಿರಾಮ ಘೋಷಿಸಿದ್ದಾರೆ. ಇಸ್ಲಾಮಿಕ್ ಕಾನೂನು ಪಾಕಿಸ್ತಾನದ ಸಂವಿಧಾನದ ಚೌಕಟ್ಟಿನ ಅಡಿಯಲ್ಲಿದೆಯೆಂದು ತಾವು ನಂಬಿರುವುದಾಗಿ ಗೋರ್ಡನ್ ತಿಳಿಸಿದ್ದು, ಪಾಕಿಸ್ತಾನದ ಹೊರಗೆ ಇದನ್ನು ಚರ್ಚಿಸುವಂತ ವಿಷಯವೇ ಎನ್ನುವುದು ತಮಗೆ ತಿಳಿದಿಲ್ಲವೆಂದು ಅವರು ಪ್ರತಿಕ್ರಿಯಿಸಿದರು.
ಹಿಂದೆ ಕೂಡ ಮಾಜಿ ಅಧ್ಯಕ್ಷ ಮುಷರಫ್ ಬುಡಕಟ್ಟು ಪ್ರದೇಶದ ಉಗ್ರಗಾಮಿಗಳ ಜತೆ ಶಾಂತಿ ಒಪ್ಪಂದ ಕುದುರಿಸಿದ್ದರು. ಅಮೆರಿಕ ಕೊನೆಯ ಹಂತದಲ್ಲಿ ಒಪ್ಪಂದಕ್ಕೆ ತೀವ್ರ ಪ್ರತಿರೋಧ ಒಡ್ಡಿತು. ಆದರೆ ಒಪ್ಪಂದವು ಅಪೇಕ್ಷಿತ ಫಲಿತಾಂಶ ನೀಡಲು ವಿಫಲವಾಗಿತ್ತು.
|