ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಮತ್ತು ಭೂಗತ ದೊರೆ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿಲ್ಲ ಎನ್ನುವ ಮೂಲಕ ಪಾಕಿಸ್ತಾನ ಮತ್ತೆ ತನ್ನ ಹಳೆ ವೀಣೆಯಿಂದ ಹೊಸ ರಾಗ ನುಡಿಸಲು ಹೊರಟಿದೆ.
ಈ ಬಾರಿ ಅಂತಹ ಕೆಲಸಕ್ಕೆ ಕೈ ಹಾಕಿದವರು ಪಾಕಿಸ್ತಾನದ ಆಂತರಿಕ ಸಚಿವಾವಲಯ ಮುಖ್ಯಸ್ಥ ರೆಹಮಾನ್ ಮಲಿಕ್. "ದಾವೂದ್ ಸೇರಿದಂತೆ ಯಾವುದೇ ಕ್ರಿಮಿನಲ್‌ಗಳಿಗೆ ಪಾಕಿಸ್ತಾನವು ರಕ್ಷಣೆ ಅಥವಾ ಆಶ್ರಯ ನೀಡದು" ಎಂದು ಲಾಹೋರ್‌ನಲ್ಲಿ ನಡೆದ ಸರಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ತಿಳಿಸಿದ್ದಾರೆ.
ಮತ್ತೂ ಮಾತು ಮುಂದುವರಿಸಿದ ಮಲಿಕ್, "ದಾವೂದ್ ಇಬ್ರಾಹಿಂ ಮತ್ತು ಮೌಲಾನಾ ಮಸೂದ್ ಅಜರ್ ನಮ್ಮ ದೇಶದಲ್ಲಿಲ್ಲ" ಎಂದರು.
ಮಾಧ್ಯಮಗಳು ದಾವೂದ್ ಇಬ್ರಾಹಿಂ ಮತ್ತು ಮಸೂದ್ ಇರುವಿಕೆಯನ್ನು ಆಗಾಗ ಬೊಟ್ಟು ಮಾಡಿ ತೋರಿಸುತ್ತಿದ್ದರೂ ಪಾಕಿಸ್ತಾನ ಅದ್ಯಾವುದನ್ನೂ ಒಪ್ಪಿಕೊಳ್ಳಲು ತಯಾರಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಅಲ್ಲದೆ ಈ ಭಯೋತ್ಪಾದಕರು ಪಾಕಿಸ್ತಾನದಲ್ಲೇ ಇದ್ದಾರೆ ಎನ್ನುವುದಕ್ಕೆ ಅಲ್ಲಿನ ಸಚಿವರುಗಳ ಗೊಂದಲಕಾರಿ ಹೇಳಿಕೆಗಳು ಆಗಾಗ ಪುಷ್ಟಿ ನೀಡುತ್ತಿರುತ್ತವೆ.
ಇದಕ್ಕೆ ಪೂರಕವೆಂಬಂತೆ, ಮೌಲಾನಾ ಮಸೂದ್ ಅಜರ್ ಪಾಕಿಸ್ತಾನದ ವಶದಲ್ಲಿದ್ದಾನೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಚೌಧುರಿ ಅಹ್ಮದ್ ಮುಖ್ತಾರ್ ಕಳೆದ ಡಿಸೆಂಬರ್‌ನಲ್ಲಿ ಭಾರತೀಯ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ ತಿಳಿಸಿದ್ದರು.
ಇದರ ನಂತರ ತಟ್ಟನೆ ಪ್ರತ್ಯಕ್ಷವಾಗಿ ಸ್ಪಷ್ಟನೆ ನೀಡಿದ್ದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ, "ಮಸೂದ್ ನಮ್ಮ ವಶದಲ್ಲಿಲ್ಲ. ಅವನು ನಮಗೂ ಬೇಕಾಗಿದ್ದಾನೆ" ಎಂದು ತೇಪೆ ಸಾರಿಸಿದ್ದರು.
1999ರ ಡಿಸೆಂಬರ್‌ನಲ್ಲಿ ಭಾರತದ ವಿಮಾನವನ್ನು ಕಾಠ್ಮಂಡುವಿನಿಂದ ಕಂದಹಾರ್‌ಗೆ ಅಪಹರಿಸಿ ಮಸೂದ್‌ನನ್ನು ಬಿಡುಗಡೆ ಮಾಡುವಂತೆ ಬೇಡಿಕೆಯಿಡಲಾಗಿತ್ತು. ಅದರಂತೆ ಇಂಡಿಯನ್ ಏರ್‌ಲೈನ್ಸ್‌ನಲ್ಲಿದ್ದ ಪ್ರಯಾಣಿಕರ ರಕ್ಷಣೆಗಾಗಿ ಭಾರತ ಸರಕಾರವು ಮಸೂದ್ ಮತ್ತು ಇತರ ಇಬ್ಬರು ಭಯೋತ್ಪಾದಕರನ್ನು ಬಿಡುಗಡೆ ಮಾಡಿತ್ತು. ಬಿಡುಗಡೆಯಾದ ಮಸೂದ್ ನಂತರ ಜೈಶ್-ಇ-ಮೊಹಮ್ಮದ್ ಎಂಬ ಉಗ್ರಗಾಮಿ ಸಂಘಟನೆಯನ್ನು ಹುಟ್ಟುಹಾಕಿದ್ದ.
ಮುಂಬೈ ಭಯೋತ್ಪಾದನಾ ದಾಳಿಯ ನಂತರ ಮಸೂದ್, ಟೈಗರ್ ಮೆಮೊನ್ ಮತ್ತು ದಾವೂದ್ ಇಬ್ರಾಹಿಂರನ್ನು ಹಸ್ತಾಂತರಿಸುವಂತೆ ಭಾರತ ಪಾಕಿಸ್ತಾನವನ್ನು ಕೇಳಿಕೊಂಡಿತ್ತು.
|