ಸ್ವಾಟ್ ಕಣಿವೆಯಲ್ಲಿ ತಾಲಿಬಾನ್ ಆಡಳಿತದ ಒಪ್ಪಂದದ ಎರಡನೇ ದಿನವೇ ವರದಿಗಾರನೊಬ್ಬನನ್ನು ಬರ್ಬರವಾಗಿ ಹತ್ಯೆಗೈಯಲಾಗಿದೆ. ಆ ಮೂಲಕ ವಿಶ್ವಕ್ಕೇ ತಾಲಿಬಾನ್ ತನ್ನ ಆಡಳಿತದ ಕ್ರೂರ ದರ್ಶನ ಮಾಡಿಸಿದೆ. ಜಿಯೋ ಟಿವಿ ಚಾನಲ್ ಹಾಗೂ ದಿ ನ್ಯೂಸ್ ಪತ್ರಿಕೆಗೆ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದ 28ರ ಹರೆಯದ ಮೂಸಾ ಖಾನ್ ಖೇಲ್ ಹತ್ಯೆಗೀಡಾದ ದುರ್ದೈವಿ.
ತಾಲಿಬಾನ್‌ನ ಕಪಿಮುಷ್ಟಿಯೊಳಗೆ ಬಂಧಿಯಾಗಿರುವ ಸ್ವಾಟ್‌ನ ಮಟ್ಟಾ ಎಂಬ ಪ್ರದೇಶಕ್ಕೆ ಬುಧವಾರ ವರದಿಗಾರಿಕೆಗೆ ತೆರಳಿದ್ದ ಸಂದರ್ಭ ಈ ಹೇಯ ಕೃತ್ಯ ನಡೆದಿದೆ. ಗುಂಡಿಟ್ಟು ಕೊಂದ ಬಳಿಕ ರುಂಡ ಮುಂಡ ಬೇರ್ಪಡಿಸಿರುವುದು ಹತ್ಯೆಯ ಕ್ರೂರತೆಗೆ ಸಾಕ್ಷಿಯಾಗುತ್ತದೆ. ಸ್ವಾಟ್‌ನಲ್ಲಿ ಶರಿಯತ್ ಕಾನೂನು ಜಾರಿಯಾದ ಬಳಿಕ ತಾಲಿಬಾನ್ ನಾಯಕ ಹಾಗೂ ಮೌಲ್ವಿ ಮೌಲಾನಾ ಸೂಫಿ ಮಹಮ್ಮದ್ ಜತೆಗಿನ ಮಾತುಕತೆಯನ್ನು ವರದಿ ಮಾಡಬಹುದೆಂಬ ನಿರೀಕ್ಷೆಯಲ್ಲಿ ಮೂಸಾ ಖಾನ್ ತೆರಳಿದ್ದರು. ಇದೇ ಸಂದರ್ಭ ಅವರು ಹತ್ಯೆಗೀಡಾಗಿದ್ದಾರೆ. ಆದರೆ, ಗುಂಡಿಟ್ಟು ಕೊಂದವರು ಯಾರು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಯಾವುದೇ ಉಗ್ರಗಾಮಿ ಸಂಘಟನೆಯೂ ಈ ಸಾವಿಗೆ ಕಾರಣರಾರು ಎಂಬ ಸತ್ಯವನ್ನು ಹೊರಹಾಕಿಲ್ಲ.
ಜಿಯೋ ಟಿವಿ ಚಾನಲ್ ತಮ್ಮ ವರದಿಗಾರನ ಸಾವನ್ನು ಮೊದಲು ಬಿತ್ತರಗೊಳಿಸಿದ್ದು, ಇದಕ್ಕೆ ಕಾರಣರಾದವರನ್ನು ಕೂಡಲೇ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದೆ. ಪಾಕಿಸ್ತಾನ ಮಾಧ್ಯಮಗಳು ಸೇರಿದಂತೆ ವಿಶ್ವದಾದ್ಯಂತ ಈ ಘಟನೆಗೆ ಖಂಡನೆ ವ್ಯಕ್ತವಾಗಿದೆ. ಕೇವಲ ಮೂರು ತಿಂಗಳೊಳಗೆ ಸ್ವಾಟ್ ಪ್ರದೇಶದಲ್ಲಿ ನಡೆದ ಎರಡನೇ ಹತ್ಯೆ ಇದಾಗಿದೆ.
ಪಾಕ್ ವಾರ್ತಾ ಸಚಿವ ಶೆರ್ರಿ ರೆಹಮಾನ್ ಮೂಸಾ ಖಾನ್ ಹತ್ಯೆಯನ್ನು ಖಂಡಿಸಿದ್ದು, ಕೂಡಲೇ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಈ ನಡುವೆ ಪಾಕ್ ಮಾಧ್ಯಮಗಳು ಈ ಘಟನೆಯನ್ನು ಖಂಡಿಸಿ ಗುರುವಾರ ಬಂದ್ ಘೋಷಿಸಿವೆ. |