ನವೆಂಬರ್ 26ರ ಮುಂಬಯಿ ಭಯೋತ್ಪಾದನಾ ದಾಳಿ ಪ್ರಕರಣದ ಸಂಚು ಪಾಕಿಸ್ತಾನದಲ್ಲೇ ರೂಪುಗೊಂಡಿತ್ತು ಎಂಬುದಕ್ಕೆ ಅಮೆರಿಕದ ಫೆಡರಲ್ ತನಿಖಾ ಮಂಡಳಿ (ಎಫ್‌ಬಿಐ) ಒದಗಿಸಿರುವ ಮಹತ್ವಪೂರ್ಣ ಸಾಕ್ಷ್ಯಾಧಾರಗಳೊಂದಿಗೆ ಮುಂಬಯಿ ಪೊಲೀಸರು ಭಾರತಕ್ಕೆ ಮರಳುತ್ತಿದ್ದಾರೆ.
ಮುಂಬಯಿ ದಾಳಿಕೋರ ಉಗ್ರರು ಕರಾಚಿಯಲ್ಲಿರುವ ಲಷ್ಕರ್ ಇ ತೋಯ್ಬಾದ ತಮ್ಮ ಒಡೆಯರೊಂದಿಗೆ ಯಾವ ರೀತಿಯಲ್ಲಿ ಸಂಪರ್ಕದಲ್ಲಿದ್ದರು ಎಂಬ ಕುರಿತ ಮಾಹಿತಿಯುಳ್ಳ ವಿವರಗಳನ್ನು ಎಫ್‌ಬಿಐನಿಂದ ಪಡೆ ಡಿಐಜಿ ದೇವೇನ್ ಭಾರತಿ ನೇತೃತ್ವದ ಮೂರು ಮಂದಿ ಭಾರತೀಯ ಪೊಲೀಸರ ತಂಡವು ಬುಧವಾರ ಭಾರತಕ್ಕೆ ಹೊರಟಿದೆ.
ಸೆಟಲೈಟ್ ಫೋನ್ ಮೂಲಕ ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್ (ವಿಒಐಪಿ) ಉಪಯೋಗಿಸಿ ಮಾಡಿದ ಕರೆಗಳ ವಿವರಗಳು ಹಾಗೂ ಕರಾಚಿಯಿಂದ ಮುಂಬಯಿಗೆ ಬರಲು ಉಗ್ರರು ಬಳಸಿದ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ (ಜಿಪಿಎಸ್) ವಿವರಗಳನ್ನೂ ಅಮೆರಿಕವು ಭಾರತೀಯ ಪೊಲೀಸರಿಗೆ ಒಪ್ಪಿಸಿದೆ.
ಮುಂಬಯಿಯಲ್ಲಿ ಉಗ್ರಗಾಮಿಗಳು ಬಳಸಿದ ಗುಂಡುಗಳ ಫಾರೆನ್ಸಿಕ್ ಪರೀಕ್ಷಾ ವರದಿಗಳನ್ನು ಈ ಹಿಂದೆ ಎಫ್‌ಬಿಐ ಮುಂಬಯಿ ಪೊಲೀಸರಿಂದ ಸಂಗ್ರಹಿಸಿಕೊಂಡಿತ್ತು.
ಮುಂಬಯಿ ದಾಳಿಯ ಸಂಚು ಪಾಕಿಸ್ತಾನದಲ್ಲಿ ಮಾತ್ರವೇ ನಡೆದಿದ್ದಲ್ಲ ಎಂಬ ಪಾಕಿಸ್ತಾನದ ಮತ್ತೊಂದು ಸುಳ್ಳಿಗೆ ಎಫ್‌ಬಿಐ ಈ ಪುರಾವೆಗಳು ಮತ್ತೊಂದು ಆಘಾತ ನೀಡಲಿದ್ದು, ಪಾಕ್ ಮೇಲೆ ಒತ್ತಡ ಹೆಚ್ಚಲಿದೆ. 2005ರ ಡಿಸೆಂಬರ್ ತಿಂಗಳಲ್ಲಿ ಸಹಿ ಹಾಕಲಾಗಿದ್ದ 'ಪರಸ್ಪರ ಕಾನೂನು ಸಹಾಯ ಒಪ್ಪಂದ' (ಎಂಎಲ್ಎಟಿ)ದ ಅನ್ವಯ ಭಾರತವು ಸಾಕ್ಷ್ಯಾಧಾರಗಳ ವಿಶ್ಲೇಷಣೆಗೆ ಅಮೆರಿಕದ ಸಹಾಯ ಕೋರಿತ್ತು. |