ಪದೇ ಪದೇ ನಿರಾಕರಣೆ ಮಾತುಗಳಿಂದ ವಿಶ್ವಸಮುದಾಯದೆದುರು ಮುಜುಗರಕ್ಕೀಡಾಗುತ್ತಲೇ ಇರುವ ಪಾಕಿಸ್ತಾನಕ್ಕೆ ಮತ್ತೊಂದು ಮುಜುಗರ. ಮುಂಬಯಿ ದಾಳಿಗೆ ಸಂಬಂಧಿಸಿದಂತೆ ಭಾರತಕ್ಕೆ ತನಿಖಾ ತಂಡವೊಂದನ್ನು ಕಳುಹಿಸುವ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಅವರ ಹೇಳಿಕೆಗೆ ಅವರ ಸಂಪುಟದ ಸಹೋದ್ಯೋಗಿ ಶೆರಿ ರಹಮಾನ್ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ.
ಮುಂಬಯಿ ದಾಳಿಯ ತನಿಖೆಯ ಅಂಗವಾಗಿ ಪಾಕಿಸ್ತಾನವು ಎಫ್ಐಎ ತಂಡವನ್ನು ಭಾರತಕ್ಕೆ ಕಳುಹಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುತ್ತಿದೆ ಎಂದು ಗಿಲಾನಿ ಹೇಳಿಕೆ ನೀಡಿದ ಬೆನ್ನಿಗೇ, 'ನಾವು ವಿದೇಶಾಂಗ ಕಚೇರಿ ಜತೆಗೆ ಪರಿಶೀಲನೆ ಮಾಡಿಕೊಂಡಿದ್ದೇವೆ. ಪಾಕಿಸ್ತಾನದಿಂದ ಇಂತಹ ಯಾವುದೇ ಪ್ರಯತ್ನಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿಲ್ಲ' ಎಂದು ಮಾಹಿತಿ ಸಚಿವೆ ಶೆರಿ ರಹಮಾನ್ ಹೇಳಿದ್ದಾರೆ.
ಮುಂಬಯಿ ದಾಳಿಗೆ ಪಾಕಿಸ್ತಾನಿ ಸಂಪರ್ಕ ತನಿಖೆ ನಡೆಸುವ ನಿಟ್ಟಿನಲ್ಲಿ ಭಾರತವು ಪಾಕಿಸ್ತಾನದ ಫೆಡರಲ್ ತನಿಖಾ ಏಜೆನ್ಸಿ (ಎಫ್ಐಎ)ಯ ತಂಡವೊಂದನ್ನು ಕಳುಹಿಸಲು ಕೋರಿದೆ. ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದೇವೆ ಎಂದು ಗಿಲಾನಿ ಅವರು ಲಾಹೋರ್‌ನಲ್ಲಿ ಹೇಳಿಕೆ ನೀಡಿದ್ದರು.
ಆದರೆ ಇದನ್ನು, 'ಮಾಧ್ಯಮಗಳ ಊಹಾಪೋಹ' ಎಂದು ಶೆರಿ ರೆಹಮಾನ್ ತಳ್ಳಿ ಹಾಕಿದ್ದಾರೆ. |