ಮದ್ಯ ಸೇವಿಸಿ ಪತ್ರಿಕಾಗೋಷ್ಠಿ ನಡೆಸಿ ರಾಜೀನಾಮೆ ನೀಡಿದ ಜಪಾನಿನ ವಿತ್ತಖಾತೆ ಸಚಿವ ಶೊಯಿಚಿ ನಕಾಗಾವಾ ಅವರ ನಡವಳಿಕೆಗೆ ಕ್ಷಮೆಯಾಚಿಸುವುದಾಗಿ ಪ್ರಧಾನಿ ತಾರೋ ಅಸೋ ಗುರುವಾರ ತಿಳಿಸಿದ್ದಾರೆ.
ಘಟನೆ ಕುರಿತಂತೆ ತಾನು ನಿಜಕ್ಕೂ ಕ್ಷಮೆ ಕೋರುವುದಾಗಿ ಹೇಳಿದ ಪ್ರಧಾನಿ ಅಸೋ. ರಾಜೀನಾಮೆ ನೀಡಿ ತೆರವಾದ ವಿತ್ತಸಚಿವರ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಕ ಮಾಡಲಾಗುವುದು ಎಂದು ಇಂದು ಕೆಳಕೋರ್ಟ್ ಬಜೆಟ್ ಸಮಿತಿಗೆ ತಿಳಿಸಿದರು.
ಜಿ.7 ಶೃಂಗಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ವಿತ್ತಖಾತೆ ಸಚಿವ ಶೊಯಿಚಿ ನಾಕಾಗಾವಾ ಕುಡಿದ ಅಮಲಿನಲ್ಲಿ ಮಾತನಾಡುವಾಗ ತಡವರಿಸಿದ್ದರಲ್ಲದೇ ಆಗಾಗ್ಗೆ ಜೋಂಪಿನಲ್ಲಿರುವ ಹಾಗೆ ಕಣ್ಣುಗಳನ್ನು ಮುಚ್ಚುತ್ತಿದ್ದರೆಂದು ಆರೋಪಿಸಲಾಗಿತ್ತು. ಇದು ಸಾಕಷ್ಟು ವಿವಾದ ಹುಟ್ಟುಹಾಕಿತ್ತಲ್ಲದೆ ಸಚಿವರು ರಾಜೀನಾಮೆ ನೀಡುವಂತಾಗಿತ್ತು.
ತಾವು ಸುದ್ದಿಗೋಷ್ಠಿಯನ್ನು ಎದುರಿಸುವ ಮುಂಚೆ ಒಂದು ಗುಟುಕು ಮದ್ಯಕ್ಕಿಂತ ಹೆಚ್ಚು ಕುಡಿದಿರಲಿಲ್ಲವೆಂದು ಅವರು ಹೇಳಿದರು.ಜಿ7 ಬಳಿಕ ಸುದ್ದಿಗೋಷ್ಠಿಯಲ್ಲಿ ತಾವು ಜನರನ್ನು ತುಂಬ ಮುಜಗರಕ್ಕೀಡುಮಾಡಿದ್ದರಿಂದ ತಾವು ಮತ್ತೊಮ್ಮೆ ಕ್ಷಮೆ ಯಾಚಿಸುವುದಾಗಿ ಟೋಕಿಯೊದಲ್ಲಿ ವರದಿಗಾರರಿಗೆ ತಿಳಿಸಿದ್ದರು.
ಒಂದು ಹಂತದಲ್ಲಿ ಬ್ಯಾಂಕ್ ಆಫ್ ಜಪಾನ್ ಗವರ್ನರ್‌ಗೆ ಕೇಳಿದ ಪ್ರಶ್ನೆಯನ್ನು ತಮಗೆ ಕೇಳಿದ್ದೆಂದು ಅವರು ತಪ್ಪಾಗಿ ಭಾವಿಸಿದ್ದರು.ಇದೊಂದು ಮುಜುಗರಕ್ಕೀಡಾಗುವ ಸಂಗತಿ ಎಂದು ಡೆಮಾಕ್ರಟಿಕ್ ಪಕ್ಷದ ಕಾರ್ಯದರ್ಶಿ ಜನರಲ್ ಯೂಕಿಯೊ ಹಟೊಯಾಮಾ ತಿಳಿಸಿದ್ದು, ಇಡೀ ಜಗತ್ತಿಗೆ ಕೆಟ್ಟ ಸಂದೇಶ ಕಳಿಸಿದಂತಾಗಿದ್ದು, ರಾಷ್ಟ್ರೀಯ ಹಿತಾಸಕ್ತಿಗೆ ಹಾನಿಯಾಗಿದೆಯಂದು ಪ್ರತಿಕ್ರಿಯಿಸಿದ್ದರು. |