ಕರಾಚಿ: ಸ್ವಾಟ್ ಪ್ರದೇಶದಲ್ಲಿ ಮುಚ್ಚಿದ ಹೆಣ್ಣುಮಕ್ಕಳ ಶಾಲೆಗಳನ್ನು ಮಾರ್ಚ್ 1ರಂದು ಮತ್ತೆ ತೆರೆಯಲು ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತದೆ ಎಂದು ಪಾಕಿಸ್ತಾನ ವಾರ್ತಾ ಸಚಿವೆ ಶೆರಿ ರೆಹಮಾನ್ ಭರವಸೆ ನೀಡಿದ್ದಾರೆ.
ಉಗ್ರವಾದಿಗಳು ಹೆಣ್ಣುಮಕ್ಕಳು ಶಾಲೆಗೆ ಹೋಗುವುದಕ್ಕೆ ಪ್ರತಿಬಂಧ ಒಡ್ಡಿರುವುದು ಇದೀಗ ಅಫ್ಘಾನಿಸ್ತಾನದ ಹಳೆಯ ಕರಾಳ ತಾಲಿಬಾನ್ ಆಡಳಿತದ ದಿನಗಳನ್ನು ನೆನಪಿಸುತ್ತದೆ. ದುಡಿಯುವ ಮಹಿಳೆಯನ್ನೂ ಒತ್ತಾಯಪೂರ್ವಕವಾಗಿ ಮನೆಗೆ ಕಳುಹಿಸುವಷ್ಟು ಕಟ್ಟುನಿಟ್ಟಿನ ವಾತಾವರಣ ಅಲ್ಲಿತ್ತು.
ಕರಾಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೆಹಮಾನ್, ಸ್ವಾಟ್ ಕಣಿವೆಯಲ್ಲಿ ಮಾರ್ಚ್ ತಿಂಗಳಲ್ಲಿ ಶಾಲೆಯನ್ನು ಪುನರಾರಂಭಿಸಲು ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತದೆ. ಹೆಣ್ಣುಮಕ್ಕಳಿಗೆ ಶಾಲೆಗೆ ಹೋಗಲು ಧೈರ್ಯ ನೀಡುವ ಜತೆಗೆ ಶಿಕ್ಷಣದ ಆಶಾಕಿರಣ ಮಾಸದಂತೆ ಕಾಪಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.
ಆದರೆ, ಸ್ವಾಟ್ ಪ್ರದೇಶದಲ್ಲಿ ಮತ್ತೆ ಶಾಲೆ ತೆರೆಯುವುದು ಅಷ್ಟು ಸುಲಭದ ಕೆಲಸವಲ್ಲ. ಯಾಕೆಂದರೆ ಈ ಪ್ರದೇಶ ಪಾಕ್‌ನ ಬುಡಕಟ್ಟು ಪ್ರದೇಶ ಹಾಗೂ ಪಾಕ್-ಅಫ್ಘನ್ ಗಡಿ ಪ್ರದೇಶ. ಜತೆಗೆ ಅಲ್ಲದೆ ಪಶ್ಚಿಮದಲ್ಲಿ ಅಲ್-ಖೈದಾ ಸಂಘಟನೆಗಳ ನಾಯಕರು ಬೇರೂರಿರುವ ಪ್ರದೇಶವೂ ಆಗಿದೆ. ಹೀಗಾಗಿ ಶಾಲೆ ತೆರೆಯಬೇಕಾದರೆ, ಅದಕ್ಕೆ ಸಾಕಷ್ಟು ಪೂರ್ವ ತಯಾರಿಯ ಭದ್ರತಾ ವ್ಯವಸ್ಥೆಯನ್ನೂ ಸರ್ಕಾರ ಮಾಡಬೇಕಾಗುತ್ತದೆ.
ಸ್ವಾಟ್ ಪ್ರದೇಶದಲ್ಲಿ ತಾಲಿಬಾನ್ ಗೆರಿಲ್ಲಾಗಳು ಭದ್ರತಾ ಪಡೆಯೊಂದಿಗೆ ರಕ್ತಸಿಕ್ತ ಹೋರಾಟ ನಡೆಸುತ್ತಿರುವುದರಿಂದ ಸ್ಥಳೀಯ ಪೋಲೀಸ್ ಹಾಗೂ ಸರ್ಕಾರಿ ಅಧಿಕಾರಿಗಳಿಗೆ ತಾಲಿಬಾನಿಗಳನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ಕೆಲವು ತಿಂಗಳಿಂದೀಚಿಗೆ ಉಗ್ರವಾದಿಗಳು ಸುಮಾರು 170 ಶಾಲೆಗಳನ್ನು ಸುಟ್ಟುಹಾಕಿದ್ದು, ಇವುಗಳಲ್ಲಿ ಬಹುತೇಕ ಶಾಲೆಗಳು ಹೆಣ್ಣುಮಕ್ಕಳವು ಎಂಬುದು ಇಲ್ಲಿ ಗಮನಾರ್ಹ. ಜತೆಗೆ ಡಿಸೆಂಬರ್‌ನಲ್ಲಿ, ಜನವರಿ 15ರೊಳಗೆ ಹೆಣ್ಣುಮಕ್ಕಳ ಎಲ್ಲ ಶಾಲೆಗಳನ್ನು ಮುಚ್ಚಬೇಕೆಂಬ ಬೆದರಿಕೆ ಒಡ್ಡಿದ್ದರು.
ಒಂದೇ ಶೈಕ್ಷಣಿಕ ಸಂಘಕ್ಕೆ ಸೇರಿದ 400 ಖಾಸಗಿ ಶಾಲೆಗಳಿಗೆ ಚಳಿಗಾಲದ ರಜೆಯ ಸಂದರ್ಭವೇ ಬೆದರಿಕೆ ಬಂದ ಹಿನ್ನೆಲೆಯಲ್ಲಿ ರಜೆಯ ನಂತರ ಶಾಲೆ ಆರಂಭವೇ ಆಗಿರಲಿಲ್ಲ. |