ಮುಂಬೈ ದಾಳಿಗಾಗಿ ಬಾಂಗ್ಲಾದೇಶದ ನೆಲವನ್ನು ಭಯೋತ್ಪಾದಕರು ಬಳಸಿರುವ ಸಾಧ್ಯತೆಯಿದೆ ಎಂದು ಘಟನೆ ನಡೆದ ಬರೋಬ್ಬರಿ ಮೂರು ತಿಂಗಳಿನ ನಂತರ ಬಾಂಗ್ಲಾದೇಶ ಅಧಿಕೃತ ಹೇಳಿಕೆ ನೀಡಿದೆ. ಸ್ವತಃ ಇಲ್ಲಿನ ಸಚಿವರೊಬ್ಬರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಮುಂಬೈ ದಾಳಿ ಸೇರಿದಂತೆ ಇತ್ತೀಚೆಗಿನ ಕೆಲವು ತಿಂಗಳುಗಳಿಂದ ಈ ಪ್ರಾಂತ್ಯದಲ್ಲಿ ನಡೆಯುತ್ತಿರುವ ಹಲವು ಭಯೋತ್ಪಾದಕರ ಕುಕೃತ್ಯಗಳಲ್ಲಿ ಬಾಂಗ್ಲಾ ನೆಲವನ್ನು ದುಷ್ಕರ್ಮಿಗಳು ಬಳಸಿರುವ ಸಾಧ್ಯತೆಯಿದೆ ಎಂದು ಬಾಂಗ್ಲಾದೇಶ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹನ್ ಮೆಮೂದ್ ಬಹಿರಂಗಪಡಿಸಿದ್ದಾರೆ.
ನಿಷೇಧಿತ ಉಗ್ರಗಾಮಿ ಸಂಘಟನೆ ಹರ್ಕತುಲ್ ಜಿಹಾದುಲ್ ಇಸ್ಲಾಮಿ ಬಾಂಗ್ಲಾದಲ್ಲೇ ತನ್ನ ನೆಲೆ ಹೊಂದಿದೆ ಮತ್ತು ಇಲ್ಲಿಂದಲೇ ಕಾರ್ಯಾಚರಿಸುತ್ತಿದೆ ಎಂಬುದನ್ನೂ ಇದೇ ಸಂದರ್ಭದಲ್ಲಿ ಸಚಿವರು ಒಪ್ಪಿಕೊಂಡರು.
ಇಂತಹ ದಾಳಿಗಳನ್ನು ನಡೆಸುವ ಮೊದಲು ಉಗ್ರರಿಗೆ ಪಾಕಿಸ್ತಾನ ಮತ್ತು ಅಪಘಾನಿಸ್ತಾನಗಳಲ್ಲಿ ತರಬೇತಿ ನೀಡಿ ನಂತರ ಬಾಂಗ್ಲಾದೇಶಕ್ಕೆ ರವಾನಿಸಲಾಗುತ್ತಿದೆ ಎಂದೂ ತಿಳಿಸಿದ ಮೆಮೂದ್, "ಲಷ್ಕರ್-ಇ-ತೊಯ್ಬಾ ಮತ್ತು ಹರ್ಕತುಲ್ ಜಿಹಾದ್‌ನಂತಹ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನ ಮತ್ತು ಅಪಘಾನಿಸ್ತಾನಗಳಲ್ಲಿ ಉಗ್ರ ತರಬೇತಿ ನೀಡಿ ನಂತರ ಅವರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗುತ್ತದೆ. ಉಗ್ರರನ್ನು ದಮನಿಸುವುದು ನಮ್ಮ ಕೆಲಸವೂ ಹೌದು. ನಾವದಕ್ಕೆ ಬದ್ಧರಾಗಿದ್ದೇವೆ" ಎಂದರು.
ಮುಂಬೈ ದಾಳಿಯ ಹಿಂದೆ ಬಾಂಗ್ಲಾದೇಶದ ನೆಲದಿಂದ ಕಾರ್ಯಾಚರಿಸಲ್ಪಡುವ ನಿಷೇಧಿತ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ (ಹುಜಿ) ಉಗ್ರಗಾಮಿ ಸಂಘಟನೆ ಕೈವಾಡವಿರುವ ಸಾಧ್ಯತೆಯಿದೆ ಎಂದು ಈ ಹಿಂದೆ ಪಾಕಿಸ್ತಾನ ಫೆಡರಲ್ ತನಿಖಾ ಸಂಸ್ಥೆ ತಿಳಿಸಿತ್ತು.
|