`ಪಾಕಿಸ್ತಾನ ಉಗ್ರರ ಸ್ವರ್ಗ'. ಹೀಗೆ ವ್ಯಾಖ್ಯಾನಿಸಿದ್ದು ಅಮೆರಿಕದ ರಾಜ್ಯಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್. ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಜಾಗತಿಕ ಆರ್ಥಿಕ ಕುಸಿತದ ಒತ್ತಡ ಪಾಕಿಸ್ತಾನದ ಮೇಲೆ ಬಹಳವಿದ್ದರೂ, ಅದು ಉಗ್ರರ ಪಾಲಿಗೊಂದು ಅಘೋಷಿತ ಸ್ವರ್ಗವಾಗಿಬಿಟ್ಟಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭ ರಾಷ್ಟ್ರೀಯ ಗುಪ್ತಚರ ಇಲಾಖೆ ನಿರ್ದೇಶಕ ಡೆನಿಸ್ ಬ್ಲೇರ್ ಮಾತನ್ನು ಪುಷ್ಠೀಕರಿಸಿದ ಕ್ಲಿಂಟನ್, ಜಾಗತಿಕ ಆರ್ಥಿಕ ಕುಸಿತ ವಿಶ್ವದ ಭಯೋತ್ಪಾದನೆಯನ್ನು ಹತ್ತಿಕ್ಕಲು ಸವಾಲಾಗಿ ಪರಿಣಮಿಸಿದೆ. ರಕ್ಷಣಾ ವಲಯವನ್ನು ಬಲಪಡಿಸಿಕೊಳ್ಳದಿದ್ದಲ್ಲಿ ಅಪಾಯ ಕಾದಿದೆ ಎಂದು ವಿವರಿಸಿದರು.
ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಇತರ ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ಉಗ್ರರ ಹೆಚ್ಚಿದ ಬೆದರಿಕೆಯನ್ನು ಸುಲಭವಾಗಿ ತಳ್ಳಿಹಾಕುವಂತಿಲ್ಲ ಎಂದ ಅವರು ಉಗ್ರರ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ, ಈ ಜಾಗತಿಕ ಕುಸಿತದಿಂದಾಗಿ ಪರಿಸ್ಥಿತಿ ಅಂದಿನಂತಿಲ್ಲ. ಜತೆಗೆ ಹಲವಾರು ಮಂದಿ ನಿರುದ್ಯೋಗಿಗಳಾಗಿದ್ದಾರೆ. ಯಾವುದೇ ರಾಷ್ಟ್ರ ಆರ್ಥಿಕವಾಗಿ ಹಿನ್ನಡೆಯಲ್ಲಿರುವಾಗ, ಇವೆಲ್ಲವೂ ಸರ್ಕಾರಗಳ ಲೆಕ್ಕಾಚಾರಗಳನ್ನು ಬುಡಮೇಲು ಮಾಡುತ್ತವೆ ಎಂದರು.
|