170ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಮುಂಬಯಿ ಹತ್ಯಾಕಾಂಡವನ್ನು ರೂಪಿಸಿ ಅನುಷ್ಠಾನಗೊಳಿಸಿದ್ದ ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರ್ ಇ ತೋಯ್ಬಾವು ಭಾರತದ ವಾಣಿಜ್ಯ ಕೇಂದ್ರವನ್ನಷ್ಟೇ ಅಲ್ಲ, ವಿಶ್ವಾದ್ಯಂತ ಒಟ್ಟು 320 ಸ್ಥಳಗಳಲ್ಲಿ ಕಮಾಂಡೋ ಶೈಲಿಯ ಭಯೋತ್ಪಾದನಾ ದಾಳಿ ನಡೆಸಲು ಗುರಿಯಾಗಿಸಿಕೊಂಡಿತ್ತು.
ಲಷ್ಕರ್ ಸಂಘಟನೆಯ ಸಂವಹನ ವಿಭಾಗದ ಮುಖ್ಯಸ್ಥ ಜರಾರ್ ಶಾ ಎಂಬಾತನ ಕಂಪ್ಯೂಟರ್ ಮತ್ತು ಇ-ಮೇಲ್ ಖಾತೆಯನ್ನು ಕೆದಕಿರುವ ಪಾಶ್ಚಾತ್ಯ ಬೇಹುಗಾರಿಕಾ ಏಜೆನ್ಸಿಗಳು, ಸಂಭಾವ್ಯ ಗುರಿಗಳ ಪಟ್ಟಿಯನ್ನು ಪಡೆದಿದ್ದು, ಅದರಲ್ಲಿ ಭಾರತದ 20 ಕೇಂದ್ರಗಳೂ ಸೇರಿವೆ.
ಗಾರ್ಡಿಯನ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಅನುಸಾರ, ವಿಶ್ವದಲ್ಲಿ ತಲ್ಲಣ ಮೂಡಿಸಲು ಭಾರತದ ಹೊರಗೆಯೂ ಸಾಕಷ್ಟು ಗುರಿಗಳನ್ನು ನಿಗದಿಪಡಿಸಿತ್ತು. ಮುಂಬಯಿ ದಾಳಿಯ ಪ್ರಧಾನ ಸಂಚುಕೋರರಲ್ಲಿ ಇಬ್ಬರಾದ ಶಾ ಮತ್ತು ಲಷ್ಕರ್ ಕಾರ್ಯಾಚರಣಾ ವಿಭಾಗದ ಮುಖ್ಯಸ್ಥ ಝಕಿ ಉರ್ ರಹಮಾನ್ ಲಖ್ವಿ ಈಗ ಪಾಕಿಸ್ತಾನದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೂರು ದಿನಗಳ ಕಾಲ ನಿರಂತರ ಮುಂಬಯಿಯಲ್ಲಿ ನಡೆದ ಉಗ್ರಗಾಮಿಗಳ ಅಟ್ಟಹಾಸವು ಹೊಸ ಭಯೋತ್ಪಾದನಾ ದಾಳಿ ಶೈಲಿಯನ್ನು ಅಭಿವ್ಯಕ್ತಿಸಿದ್ದು, ಈ ಬಗ್ಗೆ ಜಾಗತಿಕ ಬೇಹುಗಾರಿಕಾ ಏಜೆನ್ಸಿಗಳು ಈಗಾಗಲೇ ಎಚ್ಚರಿಕೆ ನೀಡಿವೆ. ಇತ್ತೀಚೆಗೆ ಸ್ಪೇನ್‌ನಲ್ಲಿ ಒಬ್ಬ ಭಾರತೀಯ ಹಾಗೂ 11 ಮಂದಿ ಪಾಕಿಸ್ತಾನೀಯರನ್ನು ಬಂಧಿಸಲಾಗಿದ್ದು, ಅವರು ಕೂಡ ಮುಂಬಯಿ ದಾಳಿಯಲ್ಲಿ ಪಾತ್ರ ವಹಿಸಿದ್ದಿರಬಹುದು ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ. |