ಈ ವಾರಾಂತ್ಯ ಆಸ್ಕರ್ ಪ್ರಶಸ್ತಿ ಘೋಷಿಸಲಾಗುತ್ತಿದ್ದು, ಯಾವ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂಬುದರ ಕುರಿತ ಪಟ್ಟಿಯೊಂದು ಇಂಟರ್ನೆಟ್ ವಲಯದಲ್ಲಿ ಈಗಾಗಲೇ ಪ್ರಕಟಗೊಂಡಿದೆ. ಅದರ ಪ್ರಕಾರ, ಭಾರತದ ಕಥೆಯುಳ್ಳ, ಭಾರತೀಯರೂ ಭಾಗವಹಿಸಿರುವ, ಬಹುಚರ್ಚಿತ 'ಸ್ಲಂ ಡಾಗ್ ಮಿಲಿಯನೀರ್' ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲಿದೆ.
ಅಧಿಕೃತ ಎಂಬಂತೆಯೇ ತೋರುತ್ತಿರುವ ಈ ದಾಖಲೆಯೊಂದರಲ್ಲಿ, ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಎಂಡ್ ಸೈನ್ಸಸ್‌ನ ಲೆಟರ್ ಹೆಡ್ ಕೂಡ ಇದೆ. ಮಾತ್ರವಲ್ಲದೆ, ಈ ಅಕಾಡೆಮಿಯ ಅಧ್ಯಕ್ಷ ಸಿಡ್ ಗ್ಯಾನಿಸ್ ಅವರ ಸಹಿಯಂತೆ ತೋರುವ ಕೈಬರಹವೂ ಇದೆ.
ಭಾನುವಾರ ಘೋಷಿಸಲಾಗುವ 81ನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿಯ ಅಂತಿಮ ಪಟ್ಟಿಯಿದು ಎಂದು ನ್ಯೂಸ್ ಡಾಟ್ ಕಾಂ ಡಾಟ್ ಎಯು ಎಂಬ ವೆಬ್‌ಸೈಟ್ ಈ ದಾಖಲೆಯನ್ನು ಉಲ್ಲೇಖಿಸಿ ಹೇಳಿದೆ.
ಪಟ್ಟಿಯ ಪ್ರಕಾರ, ಕೇಟ್ ವಿನ್ಸ್‌ಲೆಟ್ 'ದಿ ರೀಡರ್' ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ, 'ದಿ ರೆಸ್ಲರ್' ಚಿತ್ರದ ನಾಯಕ ಮಿಕಿ ರೂರ್ಕಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಗಳಿಸಲಿದ್ದಾರೆ. ದಿ ಡಾರ್ಕ್ ನೈಟ್ ಚಿತ್ರದ ನಟನೆಗಾಗಿ ಹೀತ್ ಲೆಡ್ಜರ್ ಅವರು ಅತ್ಯುತ್ತಮ ಪೋಷಕ ನಟ, ಡೌಟ್ ಚಿತ್ರದಲ್ಲಿ ಕಾಣಿಸಿಕೊಂಡಿರುವ ಆಮಿ ಆಡಮ್ಸ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗಿಟ್ಟಿಸಲಿದ್ದಾರಂತೆ.
ಸ್ಲಂಡಾಗ್ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಹಾಗೂ ಅದರ ನಿರ್ದೇಶಕ ಡ್ಯಾನಿ ಬಾಯ್ಲ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಲಿದೆ ಎಂದು ಈ ಪಟ್ಟಿ ಹೇಳುತ್ತದೆ.
ಆದರೆ ಈ ಪಟ್ಟಿಯನ್ನು ಆಸ್ಕರ್ ಪ್ರಶಸ್ತಿ ನೀಡುವ ಅಕಾಡೆಮಿಯ ಪ್ರತಿನಿಧಿಗಳು 'ಶುದ್ಧ ಬೋಗಸ್' ಎಂದು ತಳ್ಳಿ ಹಾಕಿದ್ದಾರೆ. ಪ್ರೈಸ್‌ವಾಟರ್‌ಕೂಪರ್ಸ್ ಸಂಸ್ಥೆಯು ಇನ್ನೂ ಮತಗಳ ಎಣಿಕೆ ಮಾಡುತ್ತಿದ್ದು, ಅಕಾಡೆಮಿ ಅಧ್ಯಕ್ಷರಿಗೂ ಇದು ಗೊತ್ತಿರುವುದಿಲ್ಲ. ಇಬ್ಬರಿಗೆ ಮಾತ್ರವೇ ಈ ಪಟ್ಟಿ ಮೊದಲೇ ತಿಳಿದಿರುತ್ತದೆ ಎಂದು ಆಸ್ಕರ್ ಪ್ರಶಸ್ತಿ ವಕ್ತಾರ ಲೆಸ್ಲೀ ಉಂಗರ್ ಪ್ರತಿಕ್ರಿಯಿಸಿದ್ದಾರೆ. |