ಹತ್ಯೆಗೀಡಾದ ಸ್ಥಳೀಯ ಶಿಯಾ ಮುಸ್ಲಿಂ ಮುಂದಾಳುವೊಬ್ಬರ ಅಂತ್ಯಸಂಸ್ಕಾರ ಸಂದರ್ಭ ಆತ್ಮಹತ್ಯಾ ಬಾಂಬ್ ಸ್ಫೋಟಿಸಿದ ಪರಿಣಾಮವಾಗಿ ಕನಿಷ್ಠ 20 ಮಂದಿ ಸಾವನ್ನಪ್ಪಿದ ಘಟನೆ ಪಾಕಿಸ್ತಾನದ ತಾಲಿಬಾನ್ ಪ್ರಾಬಲ್ಯವಿರುವ ವಾಯುವ್ಯ ಭಾಗದಲ್ಲಿ ಶುಕ್ರವಾರ ನಡೆದಿದೆ.
25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸ್ಫೋಟ ನಡೆದ ಡೇರಾ ಇಸ್ಮಾಯಿಲ್ ಖಾನ್ ಪಟ್ಟಣದ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಬಳಿಕ ಈ ಪಟ್ಟಣದಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಗುರುವಾರ ಅಪರಿಚಿತ ಬಂದೂಕುಧಾರಿಗಳಿದ ಹತ್ಯೆಗೀಡಾದ ಶಿಯಾ ಧಾರ್ಮಿಕ ಮುಂದಾಳು ಶೇರ್ ಜಮಾನ್ ಅವರ ಅಂತಿಮಯಾತ್ರೆ ವೇಳೆ ಈ ದಾಳಿ ನಡೆಸಲಾಗಿದೆ. ಗಾಯಗೊಂಡವರಲ್ಲಿ ಹೆಚ್ಚಿನವರ ಸ್ಥಿತಿ ಚಿಂತಾಜನಕವಾಗಿದೆ. ಇದು ಸುನ್ನಿ-ಶಿಯಾ ಜನಾಂಗೀಯ ದ್ವೇಷದ ದಾಳಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಆತ್ಮಹತ್ಯಾ ದಾಳಿ ಸಂಭವಿಸಿದ ತಕ್ಷಣವೇ ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದವರೆಲ್ಲರೂ ಆಕ್ರೋಶದಿಂದ ಹಿಂಸಾಚಾರಕ್ಕಿಳಿದು ಪೊಲೀಸರಿಗೆ, ವಾಹನಗಳಿಗೆ ಕಲ್ಲು ತೂರಿ ಹಾನಿ ಮಾಡಿದರು. ಸರಕಾರಿ ಕಚೇರಿಗಳು ಕೂಡ ದಾಂದಲೆಗೆ ತುತ್ತಾದವು. ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ. |