ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರನ್ನು ಚಿಂಪಾಂಜಿಗೆ ಹೋಲಿಸಿ ರಚಿಸಿದ್ದ ಕಾರ್ಟೂನ್ ಪ್ರಕಟಿಸಿ ವಿವಾದಕ್ಕೆ ಒಳಗಾಗಿದ್ದ `ನ್ಯೂಯಾರ್ಕ್ ಪೋಸ್ಟ್' ಪತ್ರಿಕೆ ಕ್ಷಮೆ ಕೇಳುವ ಮುಖಾಂತರ ಕೊನೆಗೂ ವಿವಾದಕ್ಕೆ ತೆರೆ ಬಿದ್ದಿದೆ.
ಬುಧವಾರದ ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಯಲ್ಲಿ ಕ್ರೂರ ಚಿಂಪಾಂಜಿಯೊಂದನ್ನು ಪೊಲೀಸನೊಬ್ಬ ಗುಂಡಿಕ್ಕಿ ಕೊಂದು ಹಾಕಿದ ಚಿತ್ರಣವುಳ್ಳ ಕಾರ್ಟೂನ್ ಪ್ರಕಟವಾಗಿತ್ತು. ಇದನ್ನು ಕೆಲವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರದೆಂದು ವ್ಯಾಖ್ಯಾನಿಸಿದ್ದರಿಂದ ಇದು ಜನಾಂಗೀಯ ಬಿಕ್ಕಟ್ಟಿಗೆ ಕಾರಣವಾಗಿತ್ತು. `ಆದರೆ, ಅಂತಹ ಉದ್ದೇಶದಿಂದ ಇದನ್ನು ರಚಿಸಿರಲಿಲ್ಲ. ಆದರೂ ಈ ಕಾರ್ಟೂನಿನಿಂದ ಜನರಿಗೆ ಆಘಾತವಾಗಿದ್ದರೆ ಅದಕ್ಕೆ ಪತ್ರಿಕೆ ಕ್ಷಮೆ ಕೋರುತ್ತದೆ' ಎಂದು ತನ್ನ ಸಂಪಾದಕೀಯ ಪುಟದಲ್ಲಿ `ದಿ ಕಾರ್ಟೂನ್' ಎಂಬ ತಲೆಬರಹದಡಿ ಪತ್ರಿಕೆ ಕ್ಷಮೆ ಕೋರಿದೆ.
ನ್ಯೂಯಾರ್ಕ್ ಪೋಸ್ಟ್‌ನ ಮುಖ್ಯ ಸಂಪಾದಕ ಕಾಲ್ ಅಲನ್ ಅವರು ಈ ಮೊದಲು ಇದನ್ನು ಸಮರ್ಥಿಸಿಕೊಂಡಿದ್ದರು. 'ಈ ಕಾರ್ಟೂನ್ ಕಾನೆಕ್ಟಿಕಟ್‌ನಲ್ಲಿ ಹಿಂಸಾಚಾರಕ್ಕಿಳಿದ ಚಿಂಪಾಜಿಯ ಹತ್ಯೆಗೆ ವ್ಯಂಗ್ಯದ ಚಾಟಿ ಬೀಸುತ್ತಿದೆ. ಅಲ್ಲದೆ, ಇದು ಅಮೆರಿಕದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನಗಳನ್ನು ಅಣಕಿಸುತ್ತಿದೆ' ಎಂದಿದ್ದ ಅವರು, ಈಗ ಕ್ಷಮೆ ಕೋರುವ ಮುಖಾಂತರ ವಿವಾದದಿಂದ ಹಿಂದೆ ಸರಿದಿದ್ದಾರೆ.
ಈ ವಿವಾದಿತ ಕಾರ್ಟೂನ್‌ನಲ್ಲಿ ಇಬ್ಬರು ಪೊಲೀಸರು, ಅವರಲ್ಲೊಬ್ಬನ ಕೈಯಲ್ಲಿ ಹೊಗೆಸೂಸುವ ಗನ್ ಇದ್ದು, ಆತ ಬುಲೆಟ್‌ಗಳಿಂದ ಜರ್ಝರಿತವಾಗಿದ್ದ ಮಂಗವೊಂದಕ್ಕೆ ಗನ್ ಗುರಿಯಾಗಿರಿಸಿದ್ದ ಚಿತ್ರಣವಿದೆ. ಅದು ಆಫ್ರಿಕನ್- ಅಮೆರಿಕನ್ನರನ್ನು ಮಂಗಗಳು ಎನ್ನುವ ಜನಾಂಗೀಯವಾದಿಗಳ ಮನಸ್ಥಿತಿಯನ್ನು ಬಿಂಬಿಸುತ್ತಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ದನಿಯೆತ್ತಿದ್ದರು.
ಅಲ್ಲದೆ, ಪುನಶ್ಚೇತನ ಮಸೂದೆಯು ಕೆಟ್ಟದಾಗಿದೆ. ಅದನ್ನು ಬಹುಶಃ ಕೋತಿಗಳೇ ಬರೆದಿರಬೇಕು ಎಂಬ ಸಂದೇಶ ನೀಡುವ ಈ ಕಾರ್ಟೂನ್, ಅಧ್ಯಕ್ಷರನ್ನೇ ಚಿಂಪಾಂಜಿಗೆ ಹೋಲಿಸುವಷ್ಟು ಪ್ರಚೋದನಾತ್ಮಕವಾಗಿದೆ. ಜತೆಗೆ, ದೇಶದ ಮೊದಲ ಆಫ್ರಿಕವ್-ಅಮೆರಿಕನ್ ಅಧ್ಯಕ್ಷರನ್ನು ಸತ್ತ ಚಿಂಪಾಂಜಿಗೆ ಹೋಲಿಸುವುದು ಜನಾಂಗೀಯ ನಿಂದನೆಯ ಹೊರತು ಬೇರೇನಲ್ಲ ಎಂದು ಹಲವು ಪತ್ರಿಕೆಗಳೂ ಸೇರಿದಂತೆ ವಿಶ್ವದೆಲ್ಲೆಡೆ ಅಭಿಪ್ರಾಯ ವ್ಯಕ್ತವಾಗಿತ್ತು. |