ತಾಲಿಬಾನಿಗಳು ಪಾಕಿಸ್ತಾನ, ಭಾರತ ಹಾಗೂ ಅಮೆರಿಕಕ್ಕೆ ಉಗ್ರ ಹಾಗೂ ಕೊಲೆಘಾತುಕ ದುಷ್ಟಶಕ್ತಿಗಳಾಗಿ ಪರಿಣಮಿಸಿದ್ದಾರೆ ಎಂಬುದನ್ನು ಸ್ವತಃ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದಿಂದ ಈಗಷ್ಟೆ ಮರಳಿದ, ಪಾಕ್ ಹಾಗೂ ಅಫ್ಘಾನಿಸ್ತಾನಕ್ಕೆ ಕಳುಹಿಸಿರುವ ಅಮೆರಿಕದ ವಿಶೇಷ ಪ್ರತಿನಿಧಿ ರಿಚರ್ಡ್ ಹಾಲ್‌ಬ್ರೂಕ್ ಖಾಸಗಿ ಟಿವಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜರ್ದಾರಿ ಜತೆಗಿನ ತಮ್ಮ ಮಾತುಕತೆಯ ಸಾರಾಂಶವನ್ನು ಬಹಿರಂಗಪಡಿಸಿದ್ದಾರೆ.
ಸ್ವಾಟ್ ಕಣಿವೆಯಲ್ಲಿ ತಮ್ಮ ಸಾಮ್ರಾಜ್ಯ ಕಟ್ಟಿಕೊಂಡಿರುವ ತಾಲಿಬಾನಿಗಳು ಕೊಲೆಘಾತುಕರಷ್ಟೇ ಅಲ್ಲ ಉಗ್ರರೂ ಕೂಡಾ. ಅವರಿಂದ ಪಾಕಿಸ್ತಾನದ ಜತೆಗೆ ಅಮೆರಿಕ ಹಾಗೂ ಭಾರತಕ್ಕೂ ಆತಂಕ ಕಾದಿದೆ ಎಂದು ಜರ್ದಾರಿ ತಮ್ಮೊಡನೆ ಹೇಳಿಕೊಂಡಿದ್ದಾರೆ ಎಂದು ರಿಚರ್ಡ್ ತಿಳಿಸಿದರು.
ಸ್ವಾಟ್ ಕಣಿವೆಯಲ್ಲಿ ಶರಿಯತ್ ಕಾನೂನು ಪಾಲನೆಗೆ ಒಪ್ಪಿಗೆ ಸೂಚಿಸಿ ಪಾಕಿಸ್ತಾನ ತಾಲಿಬಾನಿ ಗುಂಪುಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪಾಕಿಸ್ತಾನದ ಬಗ್ಗೆ ಅಮೆರಿಕ ತೀವ್ರ ತವಕ ವ್ಯಕ್ತಪಡಿಸಿದೆ. ಜತೆಗೆ ಈ ಒಪ್ಪಂದ ತಾಲಿಬಾನಿ ಉಗ್ರರಿಗೆ ಶರಣಾಗತಿಯಾಗಿ ಬದಲಾಗಬಾರದು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ರಾಜ್ಯಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಗುರುವಾರ ದೂರವಾಣಿ ಸಂಭಾಷಣೆಯೊಂದರಲ್ಲಿ ಪಾಕ್ ಅಧ್ಯಕ್ಷರಿಗೆ ತಿಳಿಸಿದ್ದಾರೆ.
ಅಮೆರಿಕದ ಕಾಳಜಿಗೆ ಪ್ರತಿಕ್ರಿಯಿಸಿರುವ ಜರ್ದಾರಿ, `ಇಸ್ಲಾಮಾಬಾದ್‌ನಿಂದ 100 ಮೈಲಿಗೂ ಕಡಿಮೆ ಅಂತರದಲ್ಲಿರುವ ಸ್ವಾಟ್ ಪ್ರದೇಶದ ಈ ಒಪ್ಪಂದವನ್ನು ನಮಗೆ ಅರಗಿಸಲು ಕಷ್ಟವಾಗುತ್ತದೆ. ಆದರೆ ಇದು ಪರಿಸ್ಥಿತಿ ಹತೋಟಿಗೆ ಬರುವವರೆಗಿನ ತಾತ್ಕಾಲಿಕ ಒಪ್ಪಂದ ಮಾತ್ರ' ಎಂಬ ಜರ್ದಾರಿ ಹೇಳಿಕೆಯನ್ನು ರಿಚರ್ಡ್ ವಿವರಿಸಿದರು. |