ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಎಲ್‌ಟಿಟಿಇ ತಮಿಳು ಉಗ್ರರು ಶ್ರೀಲಂಕಾ ರಾಜಧಾನಿ ಕೊಲೊಂಬೊ ಮೇಲೆ ವೈಮಾನಿಕ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಮೃತಪಟ್ಟು 40ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ. ತಕ್ಷಣವೇ ಎಲ್‌ಟಿಟಿಇಯ ಲಘು ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಶ್ರೀಲಂಕಾ ಸೇನೆ ತಿಳಿಸಿದೆ.
ಈ ದಾಳಿಯ ಮುಖಾಂತರ ತಮಿಳು ಟೈಗರ್‌ಗಳ ಶಕ್ತಿ ಕುಂದಿಲ್ಲ ಎಂಬುದನ್ನು ಜಗತ್ತಿಗೆ ಸಾರಿದಂತಾಗಿದೆ. ಅಲ್ಲದೆ ಕಟ್ಟೆಚ್ಚರದಲ್ಲಿದ್ದ ರಾಜಧಾನಿಗೆ ದಾಳಿ ನಡೆಸಿರುವುದರಿಂದ ಲಂಕಾ ಸರಕಾರವೇ ಬೆಚ್ಚಿ ಬಿದ್ದಿದೆ.
ಕೊಲೊಂಬೊ ನಗರದ ಕೇಂದ್ರ ಭಾಗದಲ್ಲಿರುವ ಕಂದಾಯ ಇಲಾಖೆ ಮತ್ತು ಸರಕಾರಿ ಕಚೇರಿಯೊಂದಕ್ಕೆ ಶುಕ್ರವಾರ ತಡರಾತ್ರಿ ಎರಡು ಲಘು ವಿಮಾನಗಳ ಮೂಲಕ ಬಾಂಬ್ ದಾಳಿ ನಡೆಸಲಾಗಿತ್ತು. ತಕ್ಷಣ ನಗರಾದ್ಯಂತ ವಿದ್ಯುತ್ ಕಡಿತಗೊಳಿಸಲಾಯಿತಲ್ಲದೆ ದಾಳಿ ನಡೆಸಿದ ವಿಮಾನಗಳನ್ನು ಲಂಕಾ ಸೇನೆಯು ಹೊಡೆದುರುಳಿಸಿತು ಎಂದು ವಕ್ತಾರರು ತಿಳಿಸಿದ್ದಾರೆ.
ಘಟನೆಯಲ್ಲಿ ಇಬ್ಬರು ಬಂಡುಕೋರರೂ ಸಾವನ್ನಪ್ಪಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ ನಾಲ್ಕು. ಎಲ್‌ಟಿಟಿಇ ಪೈಲಟ್‌ಗಳ ಶವಗಳು ಹತ್ತಿರದ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿವೆ ಎಂದು ಲಂಕಾ ತಿಳಿಸಿದೆ.
ಅದೇ ಹೊತ್ತಿಗೆ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಲ್‌ಟಿಟಿಇ, ಇದು ಆತ್ಮಹತ್ಯಾ ದಾಳಿಯಾಗಿತ್ತು ಎಂದು ಹೇಳಿಕೊಂಡಿದೆ. ಬಂಡುಕೋರರ ಪರ ವೆಬ್‌ಸೈಟ್‌ವೊಂದು ಪೈಲಟ್‌ಗಳಿಬ್ಬರ ಜತೆ ಎಲ್‌ಟಿಟಿಇ ಮುಖಂಡ ಪ್ರಭಾಕರನ್ ವೈಮಾನಿಕ ದಾಳಿ ನಡೆಸುವ ಮೊದಲು ತೆಗೆಸಿಕೊಂಡ ಫೋಟೋ ಪ್ರಕಟಿಸಿದೆ.
ಇವರನ್ನು ಎಲ್‌ಟಿಟಿಇಯ ತಮಿಳ್‌ಈಲಂ ವಾಯುಸೇನಾ ವಿಭಾಗದ 'ಬ್ಲ್ಯಾಕ್ ಟೈಗರ್ ಪೈಲಟ್ಸ್'ಗಳಾದ ಕರ್ನಲ್ ರೂಬನ್ ಮತ್ತು ಲೆಫ್ಟಿನೆಂಟ್ ಕರ್ನಲ್ ಸಿರಿತ್ತಿರನ್ ಎಂದು ಆ ವೆಬ್‌ಸೈಟ್ ತಿಳಿಸಿದೆ.
ಘಟನೆ ಹಿನ್ನಲೆಯಲ್ಲಿ ಲಂಕಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗಿದ್ದು, ಯಾವುದೇ ದಾಳಿಯನ್ನು ಹಿಮ್ಮೆಟ್ಟಿಸಲು ಸೇನಾ ಪಡೆ ಸಿದ್ಧವಾಗಿದೆ ಎಂದು ಶ್ರೀಲಂಕಾ ಹೇಳಿಕೊಂಡಿದೆ.
|