ಇನ್ನು `ಭಾರತೀಯರು ಬುದ್ಧಿವಂತರು' ಎಂದು ಎದೆ ತಟ್ಟಿಕೊಳ್ಳಲು ಅಡ್ಡಿಯೇನಿಲ್ಲ. ಕಾರಣ, ಅಮೆರಿಕದಲ್ಲಿ ಅತಿ ಹೆಚ್ಚು ಹಣ ಸಂಪಾದಿಸುವವರು ಭಾರತೀಯರು! ಜತೆಗೆ ಅತಿ ಹೆಚ್ಚು ಓದಿದವರು ಅರ್ಥಾತ್ ಶಿಕ್ಷಣ ಪಡೆದವರ ಪೈಕಿಯೂ ನಂ.1 ಸ್ಥಾನ ಭಾರತೀಯರ ಮುಡಿಗೇ.
ಈ ವಿಷಯ ಬಹಿರಂಗಪಡಿಸಿದ್ದು ಅಮೆರಿಕದ ಇತ್ತೀಚಿನ ಜನಗಣತಿ. ಈ ಸಮೀಕ್ಷೆಯ ಪ್ರಕಾರ, ಅಮೆರಿಕದಲ್ಲಿ ವಾಸವಾಗಿರುವ ವಿದೇಶೀಯರ ಪೈಕಿ ಹಣ ಸಂಪಾದನೆಯಲ್ಲಿ ಹಾಗೂ ಅತಿ ಹೆಚ್ಚು ಶಿಕ್ಷಣ ಪಡೆದವರಲ್ಲಿ ಭಾರತೀಯರದೇ ಮೇಲುಗೈಯಂತೆ.
ಅಮೆರಿಕದಲ್ಲಿ 1.5 ಮಿಲಿಯನ್ ಭಾರತೀಯರಿದ್ದಾರೆ. ಅಮೆರಿಕದಲ್ಲಿನ ಭಾರತೀಯರ ಕೌಟುಂಬಿಕ ಆದಾಯ 91,195 ಯುಎಸ್ ಡಾಲರ್‌ಗಳಾದರೆ, ಒಟ್ಟು ಜನತೆಯ ಆದಾಯ ಸುಮಾರು 50,740 ಯುಎಸ್ ಡಾಲರ್‌ಗಳು. ಅಲ್ಲದೆ, ವಿದೇಶೀ ಮೂಲದ ಅಮೆರಿಕ ನಿವಾಸಿಗಳ ಆದಾಯ 46,881 ಯುಎಸ್ ಡಾಲರ್‌ಗಳಾದರೆ, ಅಮೆರಿಕ ಜನತೆಯ ಆದಾಯ 51,249 ಯುಎಸ್ ಡಾಲರ್‌ಗಳು.
ಉಳಿದ ಎಲ್ಲ ವಿದೇಶೀ ಅಮೆರಿಕ ನಿವಾಸಿಗಳಿಗಿಂತ ಭಾರತೀಯರು ವಿದ್ಯಾಭ್ಯಾಸದಲ್ಲೂ ಮುಂದಿದ್ದಾರೆ. ಭಾರತೀಯ ಅಮೆರಿಕ ನಿವಾಸಿಗಳಲ್ಲಿ ಶೇ.74 ಮಂದಿ ಪದವಿ ಹಾಗೂ ಉನ್ನತ ವ್ಯಾಸಂಗ ಮಾಡಿದ್ದರೆ, ಉಳಿದ ವಿದೇಶೀ ಮೂಲದ ಅಮೆರಿಕ ನಿವಾಸಿಗಳು ಕೇವಲ ಶೇ.27 ಮಂದಿಗೆ ಮಾತ್ರ ಉತ್ತಮ ಶೈಕ್ಷಣಿಕ ಹಿನ್ನೆಲೆಯಿದೆ. ಆದರೆ ಅಮೆರಿಕನ್ನರ ಪೈಕಿ ಶೇ.28 ಮಂದಿ ಪದವಿ ವಿದ್ಯಾಭ್ಯಾಸ ಪಡೆದಿದ್ದಾರೆ.
ಜತೆಗೆ, ಅಮೆರಿಕ ಜನಸಂಖ್ಯೆಯ ಶೇ.85ರಲ್ಲಿ, ಶೇ.68 ಮಂದಿ ವಿದೇಶೀ ಅಮೆರಿಕ ನಿವಾಸಿಗಳು ಹಾಗೂ ಶೇ.88ರಷ್ಟು ಅಮೆರಿಕನ್ನರು ಕೇವಲ ಹೈಸ್ಕೂಲು ಓದಿದ್ದಾರೆ.ಈಜಿಪ್ಟ್ ಹಾಗೂ ನೈಜೀರಿಯಾದ ಅಮೆರಿಕ ನಿವಾಸಿಗಳು ಶೇ.60 ಹಾಗೂ ಚೀನಾ ಮೂಲದ ಅಮೆರಿಕ ವಾಸಿಗಳ ಪೈಕಿ ಶೇ.80 ಮಂದಿ ಕೇವಲ ಹೈಸ್ಕೂಲು ಮುಗಿಸಿದ್ದಾರೆ. ಅಮೆರಿಕದ ವಲಸಿಗರ ಪೈಕಿ ಸಂಖ್ಯೆಯಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನವಿದೆ. 11.7 ಮಿಲಿಯನ್ ಮೆಕ್ಸಿಕನ್ ಮೂಲದ ಮಂದಿ ಅಮೆರಿಕದಲ್ಲಿ ವಾಸವಾಗಿದ್ದು ಮೊದಲ ಸ್ಥಾನದಲ್ಲಿದ್ದಾರೆ. 1.9 ಮಿಲಿಯನ್ ಚೀನಾದ ಮಂದಿ ಎರಡನೇ ಸ್ಥಾನದಲ್ಲಿದ್ದರೆ, ಪಿಲಿಪೈನ್ಸ್‌ನ 1.7 ಮಿಲಿಯನ್ ಜನರು ಅಮೆರಿಕದ ನಿವಾಸಿಗಳಾಗಿ ಮೂರನೇ ಸ್ಥಾನದಲ್ಲಿದ್ದಾರೆ. 1.5 ಮಿಲಿಯನ್ ಮಂದಿ ಭಾರತೀಯರು ಸಂಖ್ಯಾಬಲದಲ್ಲಿ ಅಮೆರಿಕದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ ಎಂದು ಹೇಳುತ್ತದೆ ಜನಗಣತಿ. ಅಮೆರಿಕ ಸೆನ್ಸಸ್ ಬ್ಯೂರೋ ತನ್ನ 2007ರ ಜನಗಣತಿ ದಾಖಲೆಗಳ ಮೂಲಕ ಈ ಸಂಖ್ಯಾವಾರು ವಿವರಗಳನ್ನು ಹೊರಹಾಕಿದೆ. |