ಶುಕ್ರವಾರ ತಡರಾತ್ರಿ ತಮಿಳು ಬಂಡುಕೋರ ಎಲ್‌ಟಿಟಿಇ ಕೊಲಂಬೋದಲ್ಲಿ ನಡೆಸಿದ ವೈಮಾನಿಕ ಆತ್ಮಹತ್ಯಾ ದಾಳಿಯ ಗುರಿ ಬೇರೆಯೇ ಆಗಿತ್ತೇ? ಹೀಗೊಂದು ಪ್ರಶ್ನೆ ಶ್ರೀಲಂಕಾ ಮಿಲಿಟರಿ ವಲಯದಲ್ಲಿ ಹುಟ್ಟಿದೆ. ಜತೆಗೆ ಈ ಸಂದೇಹಕ್ಕೆ ಎಲ್‌ಟಿಟಿಇ ಪರ ವೆಬ್‌ಸೈಟೊಂದು `ಹೌದು' ಎಂಬ ಉತ್ತರವನ್ನೂ ನೀಡುತ್ತದೆ.
`ಪ್ರೋ ಎಲ್‌ಟಿಟಿಇ ತಮಿಳ್‌ನೆಟ್ ಡಾಟ್ ಕಾಂ' ಎಂಬ ವೆಬ್‌ಸೈಟ್, ಈ ದಾಳಿ ಆತ್ಮಹತ್ಯಾ ದಾಳಿಯಾಗಿತ್ತು ಎಂಬ ಎಲ್‌ಟಿಟಿಇಯ ಸತ್ಯವನ್ನು ಬಹಿರಂಗಪಡಿಸುವ ಜತೆಗೆ ಎಲ್‌ಟಿಟಿಇ ಗುರಿ ಬೇರೆಯೇ ಆಗಿತ್ತು ಎಂದೂ ಹೇಳಿಕೊಂಡಿದೆ. ಎಲ್‌ಟಿಟಿಇಯ ಗುರಿ ಶ್ರೀಲಂಕಾದ ರಾಜಧಾನಿಯಾದ ಕೊಲಂಬೋದಿಂದ 28 ಕಿಮೀ ಉತ್ತರಕ್ಕಿರುವ ವಾಯುದಳ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ನೆಲೆಯಾಗಿತ್ತು. ಆದರೂ, ಎಲ್‌ಟಿಟಿಇ ನಡೆಸಿದ ಈ ಆತ್ಮಹತ್ಯಾ ದಾಳಿ ಯೋಜನೆ ಯಶಸ್ವಿಯಾಗಿದೆ ಎಂದು ವೆಬ್‌ಸೈಟ್‌ನಲ್ಲಿ ವಿವರಿಸಲಾಗಿದೆ.
ಆದರೆ ನಿಗದಿತ ಗುರಿಯನ್ನು ಎಲ್‌ಟಿಟಿಇ ತಲುಪಿಲ್ಲ. ವಾಯುದಳದಲ್ಲಿ ಗೆರಿಲ್ಲಾಗಳ ಕ್ಷಿಪ್ರ ಕಾರ್ಯಾಚರಣೆ ಹಾಗೂ ವೈಮಾನಿಕ ನೆಲೆಯಿಂದ ಪ್ರಯೋಗಿಸಿದ ಗುಂಡಿನ ದಾಳಿಯಿಂದಾಗಿ ನಿಗದಿತ ಗುರಿಯಂತೆ ಅಲ್ಲಿ ಆತ್ಮಹತ್ಯಾ ದಾಳಿ ನಡೆಸಲಾಗಲಿಲ್ಲ ಎಂದು ವೆಬ್‌ಸೈಟ್ ಹೇಳಿಕೊಂಡಿದೆ. ಒಂದು ಟೈಗರ್ ವಿಮಾನ ಇದೇ ಸಂದರ್ಭ ಕಾತುನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಉರುಳಿದರೆ, ಇನ್ನೊಂದು ನೇರವಾಗಿ ಕೊಲಂಬೋ ಹೃದಯಾಗದ್ಲಲಿರುವ ಕಂದಾಯ ಇಲಾಖೆಯ ಬಹುಮಹಡಿ ಕಟ್ಟಡಕ್ಕೆ ಡಿಕ್ಕಿ ಹೊಡೆಯಿತು.
ಎಲ್‌ಟಿಟಿಇ ದಾಳಿ ವಿಫಲ: ಶ್ರೀಲಂಕಾ ಮಿಲಿಟರಿ
ಆದರೆ, ಶ್ರೀಲಂಕಾ ಮಿಲಿಟರಿ ವಕ್ತಾರ ಬ್ರಿಗೇಡಿಯರ್ ಉದಯ ನಾನಯಕ್ಕರ ಹೇಳುವಂತೆ, ಎಲ್‌ಟಿಟಿಇಯ ಗುರಿ ಮತ್ತೊಮ್ಮೆ ವಿಫಲವಾಗಿದೆ. ಯಾಕೆಂದರೆ ಕಂದಾಯ ಇಲಾಖೆಗೆ ಗುರಿಯಿಡುವ ಅಗತ್ಯವೇನಿರಲಿಲ್ಲ. ಬೇರೆ ಗುರಿ ಅವರಲ್ಲಿ ಖಂಡಿತ ಇದ್ದಿರಬಹುದು. ಆದರೆ, ವಾಯುದಳದ ಕ್ಷಿಪ್ರ ಆಕ್ರಮಣ ಅವರ ಗುರಿಯನ್ನು ತಪ್ಪಿಸಿತು ಎನ್ನುತ್ತಾರೆ.
ಶ್ರೀಲಂಕಾ ಮಿಲಿಟರಿ ಈಗಾಗಲೇ ಕಾತುನಾಯಕೆ ಪ್ರದೇಶದಲ್ಲಿನ ಭಗ್ನಾವಶೇಷಗಳನ್ನು ತೆಗೆದಿದೆ. ಆ ಸಂದರ್ಭ ಕಾತುನಾಯಕೆ ಪ್ರದೇಶದಲ್ಲಿ ಉರುಳಿದ ಎಲ್‌ಟಿಟಿಇ ವಿಮಾನದ ಅವಶೇಷದಲ್ಲಿ ಪೈಲೆಟ್ ಶವದ ಜತೆಗೆ ಭಾರೀ ಅನಾಹುತ ತರುವ ಬಾಂಬ್‌ಗಳಿದ್ದವು ಎಂದು ಶ್ರೀಲಂಕಾ ಮಿಲಿಟರಿ ಹೇಳಿದೆ.
ಬಂಡುಕೋರರ ಪರ ವೆಬ್‌ಸೈಟ್ ಈ ಆತ್ಮಹತ್ಯಾ ಪೈಲೆಟ್‌ಗಳು ಎಲ್‌ಟಿಟಿಇ ಮುಖಂಡ ವೇಲುಪಿಳ್ಳೈ ಪ್ರಭಾಕರನ್ ಜತೆಗೆ ನಿಂತ ಫೋಟೋ ಪ್ರಕಟಿಸಿದೆ. ಈ ಫೋಟೋ ದಾಳಿಗೆ ಮುಂಚೆ ತೆಗೆದವು ಎಂದೂ ವೆಬ್‌ಸೈಟ್ ಹೇಳಿಕೊಂಡಿದೆ. ಇವರನ್ನು ಎಲ್‌ಟಿಟಿಇಯ ತಮಿಳ್‌ಈಲಂ ವಾಯುಸೇನಾ ವಿಭಾಗದ 'ಬ್ಲ್ಯಾಕ್ ಟೈಗರ್ ಪೈಲಟ್ಸ್'ಗಳಾದ ಕರ್ನಲ್ ರೂಬನ್ ಮತ್ತು ಲೆಫ್ಟಿನೆಂಟ್ ಕರ್ನಲ್ ಸಿರಿತ್ತಿರನ್ ಎಂದು ಆ ವೆಬ್‌ಸೈಟ್ ತಿಳಿಸಿದೆ.
ಇದು 2007ರ ನಂತರ ಎಲ್‌ಟಿಟಿಇ ನಡೆಸಿದ ಏಳನೇ ವೈಮಾನಿಕ ದಾಳಿಯಾಗಿದೆ. ಮೃತ ಟೈಗರ್ ಪೈಲೆಟ್ ಎರಡು ಸೈನೈಡ್ ಕ್ಯಾಪ್ಸೂಲ್‌ಗಳನ್ನು ಹೊಂದಿದ್ದಲ್ಲದೆ, ಶಕ್ತಿಯುತ ಬಾಂಬ್ ಆತನ ಸೀಟ್‌ನಲ್ಲಿ ಪತ್ತೆಯಾಗಿವೆ. ದಾಳಿ ನಡೆಸಿದ ಲಘು ವಿಮಾನಗಳು ಜ್ಲಿನ್- ಜೆಡ್-143 ಮಾದರಿಯವು ಎಂದು ಗುರುತಿಸಲಾಗಿದ್ದು, ಈ ದಾಳಿಯಿಂದ ಎಲ್‌ಟಿಟಿಇ ಎರಡು ಲಘು ವಿಮಾನಗಳನ್ನು ಕಳೆದುಕೊಂಡಿದೆ.
ಇದೀಗ ಲಭ್ಯವಾದ ಮಿಲಿಟರಿ ಊಹೆಯ ಪ್ರಕಾರ, ಕಂದಾಯ ಇಲಾಖೆಯ ಮೇಲೆ ಬಾಂಬ್ ಹಾಕುವ ಮೂಲಕ ದ್ವಂಸ ಮಾಡುವ ಯೋಜನೆ ಎಲ್‌ಟಿಟಿಇ ರೂಪಿಸಿದ್ದಿರಬಹುದು. ಆದರೆ ವಿಮಾನ ಕಂದಾಯ ಇಲಾಖೆಯ ಮೂರು ಹಾಗೂ 12ನೇ ಮಂಹಡಿಯ ನಡುವೆ ಡಿಕ್ಕಿ ಹೊಡೆದದ್ದರಿಂದ ಲಘುವಿಮಾನವೂ ಸ್ಪೋಟಗೊಂಡಿರಬಹುದು ಎಂದಿದೆ. |