ನಾಲ್ವರು ಇರಾಕಿಗಳಿಗೆ 2007ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಿ ಶವಗಳನ್ನು ಬಾಗ್ದಾದ್ ಕಾಲುವೆಯೊಂದರಲ್ಲಿ ಎಸೆದ ಆರೋಪವನ್ನು ಹೊತ್ತಿರುವ ಅಮೆರಿಕ ಸೈನಿಕನನ್ನು ತಪ್ಪಿತಸ್ಥ ಎಂದು ಮಿಲಿಟರಿ ನ್ಯಾಯಾಲಯ ತೀರ್ಪು ನೀಡಿದೆ.
'ತೀರಾ ಸಮೀಪದಿಂದ ಇರಾಕಿಯ ತಲೆಗೆ ತಾನು ಗುಂಡಿಕ್ಕಿದ್ದಾಗಿ 'ಸಾರ್ಜಂಟ್ ಮೈಕಲ್ ಲೇಹೈ ಜೂನಿಯರ್ ತನಿಖೆದಾರರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಆದರೆ, ಸಂಘರ್ಷಪೀಡಿತ ವಲಯದಲ್ಲಿ ದೀರ್ಘಕಾಲದಿಂದ ಇದ್ದ ಮಾನಸಿಕ ಒತ್ತಡದಿಂದ ಸೂಕ್ತ ಕಾರಣ ಹೇಳಲು ಅವರು ವಿಫಲರಾಗಿದ್ದಾರೆಂದು ಅವರ ವಕೀಲರು ವಾದ ಮಂಡಿಸಿದ್ದಾರೆ. ಆದರೆ ಜರ್ಮನಿಯ ವಿಲ್‌ಸೆಕ್ ಮಿಲಿಟರಿ ನ್ಯಾಯಾಲಯ ಈ ವಾದವನ್ನು ಅಲ್ಲಗಳೆದಿದ್ದು, ಸೈನಿಕನಿಗೆ ಶಿಕ್ಷೆಯನ್ನು ಬಳಿಕ ಪ್ರಕಟಿಸಲಿದ್ದಾರೆ.
ಲಾಕ್‍ಪೋರ್ಟ್ ಇಲ್ಲಿನಾಯ್ಸ್‌ನ 28 ವರ್ಷ ವಯಸ್ಸಿನ ಸೇನಾವೈದ್ಯ ಜೈಲಿನಲ್ಲಿ ಗರಿಷ್ಠ ಜೀವಾವಧಿ ಶಿಕ್ಷೆ ಎದುರಿಸಲಿದ್ದು, ಸೇನೆಯಿಂದ ಅವಮಾನಕರ ರೀತಿಯ ಪದಚ್ಯುತಿಗೆ ಗುರಿಯಾಗಲಿದ್ದಾರೆ. ಬಾಗ್ದಾದ್ ಮಿಲಿಟರಿ ನೆಲೆ ಮೇಲೆ ದಾಳಿಗೆ ಸಂಬಂಧಿಸಿದಂತೆ ಬಂಧಿಸಿ ತನಿಖೆಗೆ ಗುರಿಯಾಗಿದ್ದ ಇರಾಕಿ ಗುಂಪಿನ ವಿರುದ್ಧ ಆರೋಪ ಹೊರಿಸಲು ಸಾಕಷ್ಟು ಸಾಕ್ಷ್ಯಾಧಾರವಿಲ್ಲವೆಂದು ನಿರ್ಧರಿಸಿದ ಬಳಿಕ ಬಂಧಿಗಳನ್ನು ಕರೆದೊಯ್ದ ಸೈನಿಕರ ತಂಡದಲ್ಲಿ ಲೆಹಿ ಕೂಡ ಒಬ್ಬನಾಗಿದ್ದ.
ಬಂಧಿಗಳ ಕಣ್ಣಿಗೆ ಬಟ್ಟೆ ಕಟ್ಟಿ ಕರೆದೊಯ್ದ ಸೈನಿಕರಲ್ಲಿ ಒಬ್ಬನಾಗಿದ್ದ ಲೆಹಿ, ನಾಲ್ವರು ಇರಾಕಿಗಳನ್ನು ಗುಂಡಿಕ್ಕಿ ಸಾಯಿಸಿದ ಬಳಿಕ ಕಾಲುವೆಯೊಂದರಲ್ಲಿ ಎಸೆದಿದ್ದನೆಂದು ಆರೋಪಿಸಲಾಗಿದೆ. 2008ರ ಜನವರಿಯಲ್ಲಿ ನಡೆದ ತನಿಖೆಯಲ್ಲಿ, ಪಿಸ್ತೂಲಿನಿಂದ ಇರಾಕಿಯೊಬ್ಬನ ತಲೆಯ ಹಿಂಭಾಗದಲ್ಲಿ ಗುಂಡಿಕ್ಕಿದ್ದಾಗಿ ಲೆಹಿ ಮಿಲಿಟರಿ ತನಿಖೆದಾರರಿಗೆ ತಿಳಿಸಿದ್ದಾನೆ.ಮಿಲಿಟರಿ ವಿಚಾರಣೆಯ ವಿಡಿಯೊ ಕೂಡ ಚಿತ್ರೀಕರಿಸಲಾಗಿದ್ದು, ಲೆಹಿ ನಿದ್ರೆಯ ಕೊರತೆಯಿಂದ ಮಾನಸಿಕ ಒತ್ತಡಕ್ಕೊಳಗಾಗಿ ಹತ್ಯೆ ಮಾಡಿದ್ದಾನೆಂದು ಅವರ ವಕೀಲ ಫ್ರಾಂಕ್ ಸ್ಪಿನ್ನರ್ ವಾದಿಸಿದ್ದಾರೆ.
|