ಸುಮಾರು 5 ವರ್ಷಗಳ ಹಿಂದೆ ಆಸಿಡ್ ದಾಳಿಗೆ ತುತ್ತಾಗಿ, ಕಣ್ಣು ಕಳೆದುಕೊಂಡ ಮಹಿಳೆಯೀಗ 'ಕಣ್ಣಿಗೆ ಕಣ್ಣು' ಎಂಬ 'ಬ್ಯಾಬಿಲೋನಿಯನ್‌ನ ಹಮ್ಮುರಾಬಿ' ಕಾನೂನನ್ನು ಉಚ್ಚರಿಸುತ್ತಿದ್ದಾರೆ.
ತನ್ನ ಕಣ್ಣನ್ನು ಕಳೆದ 26 ವರ್ಷ ವಯಸ್ಸಿನ ಮಜೀದ್ ಮೊಹಾವೇದಿಯ ಕಣ್ಣನ್ನು ನಿಧಾನವಾಗಿ ಕುರುಡಾಗಿಸಬೇಕು ಎಂದು 31ರ ವಯೋಮಾನದ ಅಮೇನಾ ಬರ್ಹಾಮಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಬಹ್ರಾಮಿ ಆಸಿಡ್ ದಾಳಿಗೆ ತುತ್ತಾಗಿ ಕಣ್ಣು ಕಳೆದುಕೊಂಡಾಗಿನಿಂದ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದು, ಬ್ಯಾಬಿಲೋನಿಯನ್‌ನ ಪ್ರಾಚೀನ ಶಿಕ್ಷೆಯಾದ ಹಮ್ಮುರಾಬಿಯ 'ಕಣ್ಣಿಗೆ ಕಣ್ಣು' ಸೂತ್ರವೇ ಸೂಕ್ತ ಎಂದು ಒತ್ತಾಯಿಸಿದ್ದಾರೆ.
ಯಾವುದೇ ವಿಮೆ ಮಾಡಿಸಿರದ ಬಹ್ರಾಮಿ ವೈದ್ಯಕೀಯ ವೆಚ್ಚ ಗಗನಕ್ಕೇರಿದರೂ ನಗದು ಪರಿಹಾರ ಬಯಸದ ಆಕೆ ತಮ್ಮ ಕಣ್ಣು ಕಳೆದ ವ್ಯಕ್ತಿಯನ್ನು ಇಸ್ಲಾಮಿಕ್ ಕಾನೂನಿನ ಅನ್ವಯ ಕುರುಡಾಗಿಸಬೇಕೆಂದು ಒತ್ತಾಯಿಸಿದ್ದಾಗಿ ಸಿಎನ್‌ಎನ್ ವರದಿ ಮಾಡಿದೆ.
ತಾವು ಸೇಡಿಗಾಗಿ ಅವನನ್ನು ಕುರುಡಾಗಿಸಲು ಬಯಸಿಲ್ಲ ಎಂದು ಟೆಹ್ರಾನ್ ನಿವಾಸದಿಂದ ಮಾತನಾಡುತ್ತಾ ಹೇಳಿದ ಅವರು, ಇಂತಹ ದುರ್ಗತಿ ಬೇರೆಯವರಿಗೆ ಆಗಬಾರದೆಂಬುದೇ ತಮ್ಮ ಉದ್ದೇಶ ಎಂದು ನುಡಿದರು.
ಒಂದೇ ವಿವಿಯಲ್ಲಿ ಓದುವಾಗ ಬಹ್ರಾಮಿ, ಮೊಹಾವೇದಿ ಸಂಧಿಸಿದ್ದರು. ಬಹ್ರಾಮಿ ಆಗ 24ರ ಪ್ರಾಯದ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಯಾಗಿದ್ದರು. ಮೊಹವೇದಿಗೆ 19ರ ಪ್ರಾಯ. ಬಹ್ರಾಮಿ ಪಕ್ಕದಲ್ಲಿ ಕುಳಿತಿದ್ದ ಅವನು ಆಕೆಯ ಮೈಯನ್ನು ಸೋಕಿಸಿದ್ದನು. ಅವನಿಂದ ದೂರ ಕುಳಿತರೂ ಮತ್ತೆ ಮೈಯನ್ನು ಸ್ಪರ್ಶಿಸಿದ್ದನು.
ಮುಂದಿನ ಎರಡು ವರ್ಷಗಳ ಕಾಲ ಮದುವೆಯಾಗುವಂತೆ ಮೊಹಾವೇದಿ ಕಿರುಕುಳ ನೀಡುತ್ತಾ ಬೆದರಿಕೆ ಒಡ್ಡುತ್ತಿದ್ದನೆಂದು ಅವರು ಹೇಳಿದ್ದಾರೆ. 2004ರ ನವೆಂಬರ್‌ನಲ್ಲಿ ಟೆಹ್ರಾನ್ ಬೀದಿಯಲ್ಲಿ ಹಿಂದಿನಿಂದ ಆಗಮಿಸಿ ಮುಖಕ್ಕೆ ಆಸಿಡ್ ಎರಚಿದನೆಂದು ಅವರು ಆರೋಪಿಸಿದ್ದಾರೆ.
ಕಳೆದ ವರ್ಷ ಇರಾನಿನ ಕೋರ್ಟ್ ಬಹ್ರಾಮಿ ಇಚ್ಛಿಸಿದ್ದನ್ನು ನೆರವೇರಿಸಿದ್ದಾರೆ. ಪ್ರತಿಯೊಂದು ಕಣ್ಣಿನಲ್ಲಿ ಆಸಿಡ್ ಹನಿಗಳನ್ನು ಬಿಡುವ ಶಿಕ್ಷೆಯನ್ನು ಮೊಹಾವೇದಿಗೆ ವಿಧಿಸಿದೆ. ಕೆಲವೇ ವಾರಗಳಲ್ಲಿ ಶಿಕ್ಷೆಯನ್ನು ಜಾರಿಗೆ ತರಲಾಗುತ್ತದೆಂದು ಬಹ್ರಾಮಿ ವಕೀಲ ತಿಳಿಸಿದ್ದಾರೆ. |