ತಾಲಿಬಾನ್ ಉಗ್ರಗಾಮಿಗಳ ಕಮಾಂಡರ್ ಶುಕ್ರವಾರ ತನ್ನ ಮಾವ ಮೌಲಾನಾ ಸೂಫಿ ಮಹಮದ್‌ನನ್ನು ಭೇಟಿಯಾಗಿದ್ದು, ಪಾಕಿಸ್ತಾನದ ಸ್ವಾಟ್ ಕಣಿವೆಯಲ್ಲಿ ಕದನವಿರಾಮವನ್ನು ಬಹುಶಃ ವಿಸ್ತರಿಸುವ ಸಾಧ್ಯತೆಯಿದೆ ಎಂದು ತಾಲಿಬಾನ್ ಹೇಳಿದೆ.
ಶಾಂತಿ ಒಪ್ಪಂದದ ಸಲುವಾಗಿ ಮೂಲಭೂತವಾದಿ ಧರ್ಮಗುರು ಸುಫಿ ಮಹಮದ್‌ನನ್ನು ಸರ್ಕಾರ ಕಳೆದ ವರ್ಷ ಬಿಡುಗಡೆ ಮಾಡಿತ್ತು. ಸೂಫಿ ಮಹಮದ್ ಬಿಡುಗಡೆಯಾದ ಬಳಿಕ ಉಗ್ರವಾದವನ್ನು ತ್ಯಜಿಸಿದ್ದು, 'ತಾಲಿಬಾನಿಗಳು ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ವಾಯವ್ಯದ ಅನೇಕ ಭಾಗಗಳು ಸೇರಿದಂತೆ ಸ್ವಾಟ್ ಕಣಿವೆಯಲ್ಲಿ ಇಸ್ಲಾಮಿಕ್ ಷರಿಯತ್ ಕಾನೂನು ಜಾರಿಗೆ ತರಬೇಕೆಂಬ ಸರ್ಕಾರದ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಅವರು ಮನವೊಲಿಸುತ್ತಿದ್ದಾರೆ.
ಸೂಫಿ ಮೊಹಮದ್ ಮತ್ತು ಮೌಲಾನಾ ಫಜಲುಲ್ಲಾ ನಡುವೆ ಬಿರುಕು ಉಂಟಾದ ಬಗ್ಗೆ ಊಹಾಪೋಹಗಳು ಹರಡಿದ್ದರೂ, ಅವರಿಬ್ಬರು ಪರಸ್ಪರ ಭೇಟಿಯಾದಾಗ ಒಡಕಿನ ಯಾವುದೇ ಲಕ್ಷಣ ಕಂಡುಬಂದಿಲ್ಲ. 'ಅವರಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ತಾಲಿಬಾನ್ ವಕ್ತಾರ ಮುಸ್ಲಿಂ ಖಾನ್ ತಿಳಿಸಿದ್ದು, ಒಂದೆರೆಡು ದಿನಗಳಲ್ಲಿ ನೀವು ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ' ಎಂದು ಮುಂದಿನ ವಾರದ ಮಧ್ಯಾವಧಿ ಮೀರಿ ಕದನವಿರಾಮದ ವಿಸ್ತರಣೆಯಾಗುವ ಅವಕಾಶಗಳನ್ನು ಉಲ್ಲೇಖಿಸುತ್ತಾ ಅವನು ಹೇಳಿದ್ದಾನೆ. |