ತಮಿಳು ವ್ಯಾಘ್ರ ಪಡೆಯ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ತನ್ನ ಕಟ್ಟ ಕಡೆಯ ಭದ್ರನೆಲೆಯಲ್ಲಿ ಅಭೂತಪೂರ್ವ ಮಿಲಿಟರಿ ಒತ್ತಡವನ್ನು ಎದುರಿಸುತ್ತಿದ್ದು, ತನ್ನ ಪತ್ನಿ ಮತ್ತು ಕಿರಿಯ ಪುತ್ರನನ್ನು ವಿದೇಶದ ಅಜ್ಞಾತ ಸ್ಥಳವೊಂದಕ್ಕೆ ಕಳಿಸಿರುವುದಾಗಿ ಮಾಧ್ಯಮದ ವರದಿಯೊಂದು ತಿಳಿಸಿದೆ.
54ರ ವಯೋಮಾನದ ಪ್ರಭಾಕರನ್ ತನ್ನ ಪತ್ನಿ ಮಡಿವದಾನಿ ಮತ್ತು ಕಿರಿಯ ಪುತ್ರ 10 ವರ್ಷ ಪ್ರಾಯದ ಬಾಲಚಂದ್ರನ್‌ನನ್ನು ಸಮುದ್ರ ಮಾರ್ಗವಾಗಿ ವಿದೇಶಕ್ಕೆ ಕಳಿಸಿದ್ದಾನೆಂದು ಗುಪ್ತಚರ ವರದಿಗಳನ್ನು ಉಲ್ಲೇಖಿಸಿ ಪತ್ರಿಕೆಯು ತಿಳಿಸಿದೆ.
ಹಿರಿಯ ಪುತ್ರ ಚಾರ್ಲ್ಸ್(ಆಂಟೋನಿ) ಮತ್ತು ಪ್ರಭಾಕರನ್ ಭದ್ರತಾ ಪಡೆಗಳ ವಿರುದ್ಧ ಹಾಗೂ ತನ್ನ ಇಚ್ಛೆಗೆ ವಿರುದ್ಧವಾಗಿ ಹೋಗುವ ತಮಿಳು ಸಮುದಾಯದ ವಿರುದ್ಧ ಇನ್ನಷ್ಟು ಭಯೋತ್ಪಾದನೆ ದಾಳಿಗಳನ್ನು ನಡೆಸಲು ಪುತ್ತುಕುಡಿಯರುಪ್ಪುನಲ್ಲೇ ತಂಗಿದ್ದಾರೆ. ಪ್ರಭಾಕರನ್‌ಗೆ ಒಬ್ಬಳು ಪುತ್ರಿ ಕೂಡ ಇದ್ದಾಳೆಂದು ಕೆಲವು ಮೂಲಗಳು ತಿಳಿಸಿದ್ದು, ಐರ್ಲೆಂಡ್‌ನಲ್ಲಿ ಓದುತ್ತಿರುವಳೆಂದು ಹೇಳಲಾಗಿದೆ.
ಏತನ್ಮಧ್ಯೆ, ಮಿಲಿಟರಿ ವಕ್ತಾರ ಬ್ರಿಗೇಡಿಯರ್ ಉದಯ ನಾನಯಕ್ಕರಾ ತಮ್ಮ ಮಿಲಿಟರಿಯ ಕಾರ್ಯಾಚರಣೆ ವಿವರ ನೀಡುತ್ತಾ, ವಿವಿಧ ದಿಕ್ಕುಗಳಿಂದ ಮುನ್ನುಗ್ಗುತ್ತಿರುವ ಪಡೆಗಳು ಎಲ್‌ಟಿಟಿಯ ಕೊನೆಯ ನೆಲೆಯ ಮೇಲೆ ಒತ್ತಡ ಹಾಕಿದ್ದು, ಎಲ್‌ಟಿಟಿಇ ಹಿಡಿತದಲ್ಲಿರುವ ಪ್ರದೇಶಗಳು ದಿನದಿನಕ್ಕೂ ಕ್ಷೀಣಿಸುತ್ತಿವೆಯೆಂದು ತಿಳಿಸಿದ್ದಾರೆ. ಎಲ್‌ಟಿಟಿಇ 73 ಚದರ ಕಿಮೀ ಭೂವ್ಯಾಪ್ತಿಯಲ್ಲಿ ಸೀಮಿತಗೊಂಡಿದೆ. ಅದು ತೀವ್ರ ಕಷ್ಟನಷ್ಟ ಅನುಭವಿಸಿದ್ದು,ಎಲ್‌ಟಿಟಿಇ ಕಾರ್ಯಕರ್ತರ 65 ದೇಹಗಳನ್ನು ಪಡೆಗಳು ಪತ್ತೆಹಚ್ಚಿವೆ ಎಂದು ಬ್ರಿ. ನಾನಾಯಕ್ಕರಾ ವರದಿಗಾರರಿಗೆ ತಿಳಿಸಿದರು. |