ಇಸ್ಲಾಮಾಬಾದ್: ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್‌ನನ್ನು ಪಾಕ್‌ಗೆ ಹಸ್ತಾಂತರಿಸದೆ, ಭಾರತದ ಕಾನೂನಿನ್ವಯವೇ ತನಿಖೆ ನಡೆಸಲಿ ಎಂದು ಪಾಕ್ ರಕ್ಷಣಾ ಸಚಿವ ಚೌಧುರಿ ಅಹ್ಮದ್ ಮುಖ್ತಾರ್ ತಿಳಿಸಿದ್ದಾರೆ.
ಭಾರತದಲ್ಲಿ ಇರುವ ಉಗ್ರ ಕಸಬ್‌ನನ್ನು ಪಾಕಿಸ್ತಾನದ ಕೈಗೊಪ್ಪಿಸದೆ, ಹೆಚ್ಚಿನ ತನಿಖೆ ನಡೆಸಲು ತಮಗೆ ಅಸಾಧ್ಯ ಎಂದು ಪಾಕ್ ಮಾಧ್ಯಮಗಳ ವರದಿ ತಿಳಿಸಿತ್ತು, ಆದರೆ ತಾನು ಕಸಬ್‌ನನ್ನು ಒಪ್ಪಿಸುವಂತೆ ಭಾರತಕ್ಕೆ ಕೋರಿಕೆ ಸಲ್ಲಿಸಿಲ್ಲ, ಅಗತ್ಯ ಬಿದ್ದರೆ ಆ ಕುರಿತು ಮಾತುಕತೆ ನಡೆಸುವುದಾಗಿ ಪಾಕಿಸ್ತಾನ ಈ ಹಿಂದೆ ಹೇಳಿಕೆ ನೀಡಿತ್ತು.
ಆದರೆ ಇದೀಗ ಏಕಾಏಕಿ ಉಗ್ರ ಕಸಬ್‌ನನ್ನು ಭಾರತ ತನ್ನ ನೆಲದ ಕಾಯ್ದೆಯನ್ವಯವೇ ತನಿಖೆಗೆ ಗುರಿಪಡಿಸಲಿದೆ ಎಂದು ಮುಖ್ತಾರ್ ವಿವರಿಸಿದ್ದಾರೆ.
ಕಸಬ್ ಪಾತಕ ಕೃತ್ಯವನ್ನು ಎಸಗಿರುವುದು ಭಾರತದ ನೆಲದಲ್ಲಿ, ಹಾಗಾಗಿ ಆತನನ್ನು ಪಾಕ್‌ಗೆ ಹಸ್ತಾಂತರಿಸುವುದು ಬೇಡ ಎಂದಿರುವ ಪಾಕ್, ಆತನಿಗೆ ತನಿಖೆಗೆ ಗುರಿಪಡಿಸಲಿ ಎಂದಿದೆ. ಅಲ್ಲದೇ ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಸೆರೆಹಿಡಿದಿರುವ ಆರೋಪಿಗಳನ್ನು ವಿಚಾರಣೆಗಾಗಿ ಪಾಕ್ ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಹಿರಿಯ ಮುಖಂಡ ಮುಖ್ತಾರ್ ತಿಳಿಸಿದ್ದಾರೆ.
ಮುಂಬೈ ದಾಳಿ ಕುರಿತಂತೆ ಅಜ್ಮಲ್ ಕಸಬ್ ಸೇರಿದಂತೆ ಒಂಬತ್ತು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಎಂಟು ಜನ ಶಂಕಿತರಲ್ಲಿ ಆರು ಮಂದಿಯನ್ನು ಬಂಧಿಸಿದ್ದು, ಇಬ್ಬರು ನಾಪತ್ತೆಯಾಗಿರುವುದಾಗಿ ಪಾಕ್ ಅಧಿಕಾರಿಗಳು ಹೇಳಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಾಲ್ಕು ಮಂದಿ ಶಂಕಿತರಿಗೆ ಮಾರ್ಚ್ 3ರ ತನಕ ಪೊಲೀಸ್ ಕಸ್ಟಡಿ ವಿಧಿಸಿತ್ತು. |