ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಗೆ ಒಳಗಾಗಿ ಸಾವಿನ ಅಂಚಿನಲ್ಲಿರುವ ಟಿವಿ ರಿಯಾಲಿಟಿ ಶೊ ನಟಿ ಜೇಡ್ ಗೂಡಿ ಕೊನೆಗೂ ತನ್ನ ಭಾವೀ ಪತಿ ಜ್ವಾಕ್ ಟ್ವೀಡ್‌ನನ್ನು ಲಂಡನ್‌ನ ಕಂಟ್ರಿಹೌಸ್ ಹೋಟೆಲ್‌ನಲ್ಲಿ ಭಾನುವಾರ ವಿವಾಹವಾದಳು.
ಹೃದಯಸ್ಪರ್ಶಿ ಸಮಾರಂಭದಲ್ಲಿ ತುಂಬಿ ಹರಿದ ಕಣ್ಣೀರಧಾರೆ ಮತ್ತು ನಗುವಿನ ನಡುವೆ ದಂಪತಿ ಹಸೆಮಣೆಗೆ ಏರಿದರು. ಗೂಡಿಯ 21 ವರ್ಷ ವಯಸ್ಸಿನ ಪ್ರೇಮಿ ಟ್ವೀಡ್ ನೀಲಿ ರಾಲ್ಸ್ ರಾಯ್ ಕಾರಿನಲ್ಲಿ ಹೊಟೆಲ್‌ಗೆ ಆಗಮಿಸಿದರು. 27 ವರ್ಷ ಪ್ರಾಯದ ಜೇಡ್ ಶನಿವಾರ ರಾತ್ರಿ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದರು.
ನೋವು ನಿವಾರಕ ಔಷಧಿಗಳ ನೆರವಿನಿಂದ ನಿಂತಭಂಗಿಯಲ್ಲೇ ವಿವಾಹವಿಧಿ ಸ್ವೀಕರಿಸಿದ ಗೂಡಿ, ಸಮಾರಂಭದ ಕಡೆಯ 5 ನಿಮಿಷಗಳಲ್ಲಿ ಕುಳಿತುಕೊಂಡರೆಂದು ಜೇಡ್ ಪ್ರಚಾರಕ ಮ್ಯಾಕ್ಸ್ ಕ್ಲಿಫರ್ಡ್ ತಿಳಿಸಿದರು. ಅವರಿಬ್ಬರು ಅಪಾರ ಪ್ರೀತಿಯ ಸೆಳೆತದಲ್ಲಿ ಸಿಕ್ಕಿದ್ದಾರೆ. ವಿವಾಹವಾಗಿದ್ದು ಇಬ್ಬರಿಗೂ ಸಂತಸ ಉಂಟುಮಾಡಿದೆ ಎಂದು ಕ್ಲಿಫರ್ಡ್ ಹೇಳಿದ್ದಾರೆ.
ರಿಯಾಲಿಟಿ ಶೋನಲ್ಲಿ ಜನಾಂಗೀಯ ನಿಂದನೆ ಮಾಡಿದ ಆರೋಪಕ್ಕೆ ಗುರಿಯಾಗಿ ವಿವಾದದ ಕೇಂದ್ರಬಿಂದುವಾಗಿದ್ದ ಗೂಡಿ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದು, ಇನ್ನು ಕೆಲವೇ ತಿಂಗಳು ಬದುಕಬಹುದೆಂದು ವೈದ್ಯರು ಹೇಳಿದ್ದರೂ ವಿವಾಹಕ್ಕೆ ಹಸಿರುನಿಶಾನೆ ನೀಡಲು ಅವರಿಬ್ಬರು ನಿರ್ಧರಿಸಿದರು. ಕ್ಯಾನ್ಸರ್ ಕಾಯಿಲೆಯೊಂದಿಗೆ ಜೀವನ್ಮರಣ ಹೋರಾಟ ನಡೆಸುತ್ತಿರುವ ಗೂಡಿ, ತನ್ನ ಬದುಕಿನ ಕೊನೆಯ ಕ್ಷಣಗಳನ್ನು ಚಿತ್ರೀಕರಿಸಿಕೊಳ್ಳಲು ಅವಕಾಶ ನೀಡುವುದಾಗಿ ಹೇಳುವ ಮೂಲಕ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾಳೆ. |