ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ನೇತೃತ್ವದ ನೂತನ ಸರ್ಕಾರವು ಸೇನಾಪಡೆಗಳನ್ನು ಬಲಿಷ್ಠಗೊಳಿಸುವ ಸಲುವಾಗಿ ಅಪಾರ ರಕ್ಷಣಾ ಸಾಮಗ್ರಿಗಳ ಖರೀದಿ ಆರಂಭಿಸಲು ನಿರ್ಧರಿಸಿದೆ.
ಮಿಲಿಟರಿಯನ್ನು ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಪರಿಕರಗಳಿಂದ ಸಜ್ಜುಗೊಳಿಸಲೂ ಹಸೀನಾ ತೀರ್ಮಾನಿಸಿದ್ದಾರೆ. ಪ್ರಸಕ್ತ ಮತ್ತು ಮುಂದಿನ ವಿತ್ತೀಯ ವರ್ಷಗಳಲ್ಲಿ ಈ ಖರೀದಿಗಳನ್ನು ಮಾಡಲಾಗುವುದು ಎಂದು ಯೋಜನಾ ಸಚಿವ ಏರ್ ವೈಸ್ ಮಾರ್ಷಲ್(ನಿವೃತ್ತ) ಎ.ಕೆ. ಖೊಂಡೊಕರ್ ಸಂಸತ್ತಿಗೆ ಭಾನುವಾರ ತಿಳಿಸಿದರು.
ಸೇನೆಯನ್ನು ಸಜ್ಜುಗೊಳಿಸಲು ಹೆಲಿಕಾಪ್ಟರ್‌ಗಳು, ಟ್ಯಾಂಕ್‌ಗಳು, ಎಪಿಸಿ, ಟ್ಯಾಂಕ್ ನಿಗ್ರಹ ಮತ್ತು ವಿಮಾನ ನಿಗ್ರಹ ಕ್ಷಿಪಣಿಗಳು, ಕಣ್ಗಾವಲು ಬಂದೂಕುಗಳು, ವಿವಿಧ ರೀತಿಯ ಆಧುನಿಕ ರೇಡಿಯೊ ವ್ಯವಸ್ಥೆಗಳು, ಸ್ಫೋಟಕಗಳು, ರಾತ್ರಿ ದರ್ಶಕಗಳು ಮತ್ತಿತರ ಶಸ್ತ್ರಾಸ್ತ್ರಗಳನ್ನು 2008-09 ಮತ್ತು 2009-10ರ ಸಾಲಿನಲ್ಲಿ ಖರೀದಿಸಲಾಗುವುದು ಎಂದು ಅವರು ಸದನಕ್ಕೆ ತಿಳಿಸಿದರು.
21ನೇ ಶತಮಾನದ ಸವಾಲುಗಳನ್ನು ಎದುರಿಸಲು ನೌಕಾದಳಕ್ಕೆ ಮೂರು ಆಯಾಮಗಳ ಸಾಮರ್ಥ್ಯ ಗಳಿಕೆ ಸಲುವಾಗಿ ಮೂರು ಯುದ್ಧನೌಕೆಗಳ ಖರೀದಿ ಪ್ರಕ್ರಿಯೆ ಸಾಗಿದೆ ಎಂದು ಅವರು ಹೇಳಿದ್ದಾರೆ.
|