ಶ್ರೀಲಂಕಾ ಸರಕಾರದ ಜತೆಗೆ ಮಾತುಕತೆ ನಡೆಸಲು ತಾವು ಸಿದ್ದ ಎಂದು ಸೋಮವಾರ ಪ್ರತ್ಯೇಕತವಾದಿ ತಮಿಳು ಬಂಡುಕೋರರು ತಿಳಿಸಿದ್ದು, ಆದರೆ ವಿಶ್ವಸಂಸ್ಥೆ ಹೇಳಿದಂತೆ ತಾವು ಶಸ್ತ್ರಾಸ್ತ್ರವನ್ನು ಕೆಳಗಿಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ ಮೊದಲು ಶಸ್ತ್ರಾಸ್ತ್ರ ತ್ಯಜಿಸಬೇಕು ಎಂಬುದಾಗಿ ವಿಶ್ವಸಂಸ್ಥೆ ಕರೆ ನೀಡಿರುವುದಾಗಿ ತಿಳಿಸಿರುವ ಎಲ್‌ಟಿಟಿಇ ರಾಜಕೀಯ ವಿಭಾಗದ ಮುಖ್ಯಸ್ಥ ಬಾಲಸಿಂಘಂ ನಟೇಶನ್, ಘರ್ಷಣೆಯನ್ನು ಪರಿಹರಿಸಲು ಇದು ಪರಿಹಾರವವಲ್ಲ ಎಂದಿದ್ದಾರೆ. ಅಲ್ಲದೇ ಶಸ್ತ್ರಾಸ್ತ್ರ ತಮಿಳು ಜನರ ರಕ್ಷಣೆಯ ಆಯುಧವಾಗಿದೆ ಹಾಗೂ ಶಸ್ತ್ರಾಸ್ತ್ರ ರಾಜಕೀಯ ಹಾದಿಯ ಆಯುಧವಾಗಿದೆ ಎಂದು ವಿವರಣೆ ನೀಡಿದ್ದಾರೆ.
ಸೇನೆ ಮತ್ತು ಎಲ್‌ಟಿಟಿಇ ನಡುವೆ ನಡೆಯುತ್ತಿರುವ ಘರ್ಷಣೆಯನ್ನು ನಿಲ್ಲಿಸುವ ನಿಟ್ಟಿನಲ್ಲಿ ನಾವು ಮಾತುಕತೆ ಸಿದ್ದ, ಸಹಕಾರಕ್ಕೂ ತಯಾರು ಎಂದಿರುವ ಬಾಲಸಿಂಘಂ, ಇವೆಲ್ಲವೂ ರಾಜಕೀಯವಾಗಿಯೇ ಇತ್ಯರ್ಥವಾಗಬೇಕು ಎಂದು ವಿಶ್ವಸಂಸ್ಥೆಗೆ ಬರೆದಿರುವ ಪತ್ರದಲ್ಲಿ ತಾಕೀತು ಮಾಡಿದ್ದು, ಈ ಪತ್ರಗಳನ್ನು ಜಪಾನ್, ಬ್ರಿಟನ್, ನಾರ್ವೆ ಹಾಗೂ ಅಮೆರಿಕಕ್ಕೂ ಕಳುಹಿಸಿರುವುದಾಗಿ ಹೇಳಿದೆ.
ಕಳೆದ 25ವರ್ಷಗಳ ಪ್ರತ್ಯೇಕತವಾದಿ ಹೋರಾಟದಲ್ಲಿ ಎಲ್‌ಟಿಟಿಇ ಈ ಬಾರಿ ಶ್ರೀಲಂಕಾ ಸೇನೆಯ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಸೋಲನ್ನು ಅನುಭವಿಸಿದೆ, ತಮಿಳು ಟೈಗರ್‌ಗಳ ಹಿಡಿತದಲ್ಲಿದ್ದ ಪ್ರಬಲ ಪ್ರದೇಶಗಳನ್ನು ಕೂಡ ಸೇನೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ತಮಿಳು ಹುಲಿಗಳಿಗೆ ಬಲವಾದ ಹೊಡೆತ ನೀಡಿತ್ತು. |