ಪಾಕಿಸ್ತಾನದ ಕ್ವೆಟ್ಟಾದಲ್ಲಿ ಫೆ.2ರಂದು ಅಪಹರಣಕ್ಕೀಡಾದ ಅಮೆರಿಕದ ಯುಎನ್‌ಎಚ್‌ಸಿಆರ್ ಅಧಿಕಾರಿ ಜಾನ್ ಸೋಲೆಕಿಗೆ ಉಂಟಾದ ಗತಿಯ ಬಗ್ಗೆ ವಿರೋಧಾಭಾಸದ ಹೇಳಿಕೆಗಳು ಬರುತ್ತಿದ್ದು, ಅವರನ್ನು ಹತ್ಯೆ ಮಾಡಲಾಗಿದೆಯೆಂದು ಕೆಲವು ವರದಿಗಳು ಹೇಳಿದ್ದರೆ, ಅಂತಹ ಯಾವುದೇ ಮಾಹಿತಿಯಿಲ್ಲ ಎಂದು ವಕ್ತಾರ ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿ ಕ್ವೆಟ್ಟಾ ಪ್ರೆಸ್ ಕ್ಲಬ್‌ಗೆ ಕರೆ ಮಾಡಿ ಸೊಲೆಕಿಯನ್ನು ಹತ್ಯೆ ಮಾಡಲಾಗಿದ್ದು ಅವರ ದೇಹ ಕೆಲವೇ ಗಂಟೆಗಳಲ್ಲಿ ಸಿಗಲಿದೆ ಎಂದು ಹೇಳಿದ್ದಾನೆ. ಈ ಕರೆಯ ಜಾಡನ್ನು ಪತ್ತೆಹಚ್ಚಲು ಪೊಲೀಸರು ಯತ್ನಿಸುತ್ತಿದ್ದು, ಬಲೂಚಿಸ್ಥಾನದಿಂದ ಕರೆ ಮಾಡಲಾಗಿದೆಯೆಂದು ಕೆಲವು ವರದಿಗಳು ಹೇಳಿವೆ.
ಕ್ವೆಟ್ಟಾದಲ್ಲಿ ಯುಎನ್‌ಎಚ್‌ಸಿಆರ್ ನಾಯಕರಾಗಿದ್ದ ಸೊಲೆಕಿಯನ್ನು ಫೆ.2ರಂದು ಬಂದೂಕಿನ ಮೊನೆ ತೋರಿಸಿ ಅಪಹರಿಸಲಾಗಿತ್ತು. ಈ ಸಂಘರ್ಷದಲ್ಲಿ ಸೊಲೆಕಿ ಚಾಲಕ ಹತನಾಗಿದ್ದ.
ಏತನ್ಮಧ್ಯೆ, ಮುಂಚೆ ಹೆಸರು ಕೇಳಿರದ ಬಲೂಚಿಸ್ತಾನ ವಿಮೋಚನಾ ಸಂಯುಕ್ತ ರಂಗವು ಸೊಲೆಕಿ ತಮ್ಮ ವಶದಲ್ಲಿದ್ದಾನೆಂದು ಹೇಳಿದ್ದು, ಪಾಕಿಸ್ತಾನದಲ್ಲಿ ಬಂಧಿತರಾಗಿರುವ 141 ಮಹಿಳೆಯರನ್ನು ಬಿಡುಗಡೆ ಮಾಡುವಂತೆ ಮತ್ತು ಬಂಡುಕೋರರ ವಿರುದ್ಧ ಕಾರ್ಯಾಚರಣೆಯಲ್ಲಿ ನಾಪತ್ತೆಯಾದ 6000 ಜನರ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದೆ. |