ಶ್ರೀಲಂಕಾ ಹಾಗೂ ಎಲ್‌ಟಿಟಿಇ ನಡುವಿನ ಎಡೆಬಿಡದ ಕಾದಾಟಕ್ಕೆ ಇದೀಗ ದೊಡ್ಡಣ್ಣ ಅಮೆರಿಕ ಮಧ್ಯಪ್ರವೇಶಿಸಿದೆ. ನಾಗರಿಕನ ಮೇಲಿನ ಕಾಳಜಿಯಿಂದ ಈ ಯುದ್ಧಕ್ಕೆ ವಿರಾಮ ಹಾಕಿ ಸಂಧಾನ ನಡೆಸಲು ಶ್ರೀಲಂಕಾ ಸರ್ಕಾರ ಹಾಗೂ ತಮಿಳು ಬಂಡುಕೋರ ಎಲ್‌ಟಿಟಿಇಗೆ ಅಮೆರಿಕ ಸಲಹೆ ನೀಡಿದೆ.
ಅಮೆರಿಕ ರಾಜ್ಯಾಂಗದ ವಕ್ತಾರ ರಾಬರ್ಟ್ ವುಡ್, ಎಲ್‌ಟಿಟಿಇ ಹಾಗೂ ಲಂಕಾ ಸರ್ಕಾರ ಒಂದು ಮಾತುಕತೆಗೆ ಬಂದು ಯುದ್ಧಕ್ಕೆ ಮಂಗಳ ಹಾಡಿ ಎಂದು ಕರೆ ನೀಡಿದ್ದಾರೆ. ಮಾನವೀಯ ಮೌಲ್ಯಗಳ ಆಧಾರದಲ್ಲಿ ನಾವು ಈ ಸಲಹೆ ನೀಡಿದ್ದೇವೆ ಎಂದು ಹೇಳಿರುವ ವುಡ್, ಯುದ್ಧಭೀತಿಯಿಂದ ನಾಗರಿಕರ ದಿನನಿತ್ಯದ ಜೀವನಕ್ಕೆ ತೊಂದರೆಯಾಗುತ್ತದೆ. ಹಲವು ಮುಗ್ಧರು ಇದರಿಂದ ತಮ್ಮ ಜೀವಕ್ಕೆ ಬೆಲೆತೆರಬೇಕಾಗುತ್ತದೆ. ಇಂಥ ನೋವಿನ ಕಾದಾಟ ಬೇಡ ಎಂದಿದ್ದಾರೆ.
ಈ ಆಂತರಿಕ ಕಲಹ ಸೈನ್ಯಬಲದಿಂದ ನಿಲ್ಲುವುದಿಲ್ಲ. ಹಾಗೂ ಇದಕ್ಕೆ ಸಾಕಷ್ಟು ರಾಜತಾಂತ್ರಿಕ ಲೆಕ್ಕಾಚಾರಗಳು ಬೇಕಾಗುತ್ತದೆ. ದೇಶದ ವಿವಿಧ ರಾಜಕೀಯ ಪಕ್ಷಗಳು ಸೇರಿ ಈ ಸಮಸ್ಯೆಗೆ ಉತ್ತರ ನೀಡಬೇಕು ಎಂದರು. ಮುಗ್ಧ ನಾಗರಿಕರು ಪ್ರತಿನಿತ್ಯ ಈ ಕಾದಾಟಕ್ಕೆ ಬಲಿಯಾಗಬಾರದು ಎಂಬುದಷ್ಟೆ ನಮ್ಮ ಕಾಳಜಿ. ಅದಕ್ಕಾಗಿ ಈ ಜಗಳಕ್ಕೆ ಮಂಗಳ ಹಾಡಿ ಎಂದು ಹೇಳುತ್ತಿದ್ದೇವೆ ಎಂದೂ ಹೇಳಿದರು. ಹಾಗಾದರೆ, ಅಮೆರಿಕವೇ ಈ ಕದನ ವಿರಾಮ ಒಪ್ಪಂದದ ನೇತೃತ್ವ ವಹಿಸುತ್ತದೆಯೇ ಎಂಬ ಪ್ರಶ್ನೆಗೆ ಸರಿಯಾಗಿ ಉತ್ತರಿಸದ ಅವರು, ನಾವು ಮಾನವೀಯ ನೆಲೆಗಳಿಂದ ನಾಗರಿಕನ ಹಿತದೃಷ್ಟಿಯಿಂದ ಯುದ್ಧವನ್ನು ನಿಲ್ಲಿಸಿ ಎಂದಷ್ಟೆ ಹೇಳುತ್ತಿದ್ದೇವೆ ಎಂದು ಚುಟುಕಾಗಿ ಉತ್ತರಿಸಿದರು.
ಅಗತ್ಯ ಬಿದ್ದರೆ ಸಂಧಾನ ನೇತೃತ್ವ
ಎರಡೂ ಬಣಗಳಿಂದ ಶಾಂತಿಯ ಸ್ಥಾಪನೆಯಾಗಲು ಒಪ್ಪಂದಕ್ಕೆ ಬರಬೇಕಾಗುತ್ತದೆ. ಶ್ರೀಲಂಕಾದಲ್ಲಿರುವ ಅಮೆರಿಕನ್ ರಾಯಭಾರಿ ಹಾಗೂ ಅಮೆರಿಕ ರಾಜ್ಯಾಂಗದ ದಕ್ಷಿಣ ಏಷ್ಯಾ ಬ್ಯೂರೋ ಈಗಾಗಲೇ ಕದನ ವಿರಾಮದ ಬಗ್ಗೆ ಶ್ರೀಲಂಕಾ ಸರ್ಕಾರದ ಜತೆಗೆ ಮಾತುಕತೆ ನಡೆಸುತ್ತಿವೆ. ಜತೆಗೆ ಅಂತಾರಾಷ್ಟ್ರೀಯ ವಲಯದಿಂದಲೂ ಹಲವು ಪಕ್ಷಗಳು ಈ ಶಾಂತಿ ಸಂಧಾನಕ್ಕೆ ಪ್ರಯತ್ನ ಪಡುತ್ತಿವೆ ಎಂದು ವುಡ್ ವಿವರಿಸಿದರು.
ಈವರೆಗೆ ಅಮೆರಿಕ ನೇರವಾಗಿ ಶ್ರೀಲಂಕಾ ಸರ್ಕಾರ ಹಾಗೂ ಎಲ್‌ಟಿಟಿಇ ಕದನ ವಿರಾಮದ ಮಾತುಕತೆಗೆ ನೇತೃತ್ವ ವಹಿಸುವ ಬಗ್ಗೆ ಮಾತನಾಡಿಲ್ಲ. ಆದರೆ, ಈ ಭಿನ್ನಾಭಿಪ್ರಾಯಕ್ಕೆ ಶಾಂತಿಯ ಅಂತ್ಯ ಸ್ಥಾಪನೆಯಾಗಬೇಕಾದರೆ ಅಮೆರಿಕ ಮಧ್ಯಪ್ರವೇಶ ಅಗತ್ಯವಾದರೆ ನಾವು ಅದಕ್ಕೂ ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ಇದರ ಫಲಿತಾಂಶದಿಂದ ಶಾಂತಿ ನೆಲೆಸುವಂತಾಗಬೇಕು ಎಂದರು. |