ಶ್ರೀಲಂಕಾದ ವಾನ್ನಿ ಪ್ರದೇಶದಲ್ಲಿ ಮಾನವ ಸಂಕಷ್ಟಗಳ ಅಂತ್ಯಕ್ಕೆ ಕದನವಿರಾಮ ಘೋಷಣೆಗೆ ಸಿದ್ದವಿರುವುದಾಗಿ ಎಲ್‌ಟಿಟಿಇ ಹೇಳುತ್ತಿದ್ದು, ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ನಿರಾಕರಿಸಿದೆ.
ಆದರೆ ಎಲ್‌ಟಿಟಿಇ ಮಂಡಿಸಿರುವ ಕದನವಿರಾಮ ಪ್ರಸ್ತಾಪವನ್ನು ಸರ್ಕಾರ ಖಂಡತುಂಡವಾಗಿ ನಿರಾಕರಿಸಿದ್ದು, ಬೇಷರತ್ ಒಪ್ಪಂದ ಬಿಟ್ಟರೆ ಬೇರಾವುದನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದೆ.
ತಮಿಳು ನಾಗರಿಕರ ಸಂಕಷ್ಟಗಳಿಗೆ ತೆರೆಎಳೆಯುವ ಸದುದ್ದೇಶದಿಂದ ಅಂತಾರಾಷ್ಟ್ರೀಯ ಸಮುದಾಯದ ಕದನವಿರಾಮದ ಕರೆಗೆ ಸ್ಪಂದಿಸಲು ಎಲ್‌ಟಿಟಿಇ ಸಿದ್ಧವಿದೆ ಎಂದು ವ್ಯಾಘ್ರಗಳ ರಾಜಕೀಯ ಮುಖ್ಯಸ್ಥ ಬಿ. ನಾದೇಶನ್ ವಿಶ್ವಸಂಸ್ಥೆಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾನೆ. ಆದರೆ ಶಸ್ತ್ರಾಸ್ತ್ರ ಒಪ್ಪಿಸಿ ಶರಣಾಗತಿಯಾಗುವಂತೆ ಎಲ್‌ಟಿಟಿಇಗೆ ನೀಡಿದ ಕರೆಗಳಿಂದ ಸಂಘರ್ಷಕ್ಕೆ ಪರಿಹಾರ ಸಿಗುವುದಿಲ್ಲ ಎಂದು ಅವನು ಹೇಳಿದ್ದಾನೆ.
ಶ್ರೀಲಂಕಾ ಸರ್ಕಾರಕ್ಕೆ ಎಲ್‌ಟಿಟಿಇ ಶಸ್ತ್ರಾಸ್ತ್ರಗಳನ್ನು ತ್ಯಜಿಸದೇ ಅದರ ಜತೆ ಕದನವಿರಾಮಕ್ಕೆ ಪ್ರವೇಶಿಸುವ ಇಚ್ಛೆಯಿಲ್ಲ ಎಂದು ಸರ್ಕಾರದ ವಕ್ತಾರ ಕೆಹೆಲಿಯ ರಾಂಬುಕ್‌ವೆಲ್ಲಾ ಕೊಲಂಬೊನಲ್ಲಿ ವರದಿಗಾರರಿಗೆ ತಿಳಿಸಿದರು.ನಾದೇಸನ್ ಬರೆದಿರುವ ಪತ್ರದಲ್ಲಿ, ಎಲ್‌ಟಿಟಿಇಯ ಶಸ್ತ್ರಾಸ್ತ್ರಗಳು ತಮಿಳು ಜನರಿಗೆ ರಕ್ಷಣಾತ್ಮಕ ಗುರಾಣಿಯಾಗಿದ್ದು, ರಾಜಕೀಯ ವಿಮೋಚನೆಗೆ ಅಸ್ತ್ರವೆಂದು ಪ್ರತಿಕ್ರಿಯಿಸಿದ್ದಾನೆ. |