ಸ್ವಾಟ್ ಕಣಿವೆಯಲ್ಲಿ ಷರಿಯತ್ ಕಾನೂನಿಗೆ ಸಮ್ಮತಿಸಿ ಪಾಕಿಸ್ತಾನ ತಾಲಿಬಾನ್ ಜತೆ ಒಪ್ಪಂದ ಮಾಡಿಕೊಂಡ ಬಳಿಕ 10 ದಿನಗಳ ಕದನವಿರಾಮ ಘೋಷಿಸಿದ್ದ ತೆಹ್ರಿಕ್-ಎ-ತಾಲಿಬಾನ್ ಸಂಘಟನೆ ಮಂಗಳವಾರ ಸ್ವಾಟ್ ಕಣಿವೆಯಲ್ಲಿ ಅನಿರ್ದಿಷ್ಟಾವಧಿ ಕದನವಿರಾಮಕ್ಕೆ ಕರೆ ನೀಡಿದೆ.
ಸ್ವಾಟ್‌ನ ಮಟ್ಟಾ ಜಿಲ್ಲೆಯಲ್ಲಿ ಉಗ್ರಗಾಮಿ ನಾಯಕ ಮೌಲಾನಾ ಫಜಲುಲ್ಲಾ ಸಮಾಲೋಚನಾ ಸಭೆ ಕರೆದು ಅನಿರ್ದಿಷ್ಟಾವಧಿ ಕದನವಿರಾಮವನ್ನು ಪ್ರಕಟಿಸಿದ್ದಾನೆಂದು ತಾಲಿಬಾನ್ ವಕ್ತಾರ ಮುಸ್ಲಿಂ ಖಾನ್ ತಿಳಿಸಿದ್ದಾನೆ. ಮೌಲಾನ್ ಫಜಲುಲ್ಲಾ ನೇತೃತ್ವದಲ್ಲಿ ಶೂರಾ ಸಭೆ ಸೇರಿ ಅನಿರ್ದಿಷ್ಟಾವಧಿ ಕದನವಿರಾಮಕ್ಕೆ ನಿರ್ಧರಿಸಿದೆ.
ತಾಲಿಬಾನ್ ಜತೆ ಕದನವಿರಾಮಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿ, ತಾಲಿಬಾನ್‌ಗೆ ಪಾಕ್ ಶರಣಾಗಿದೆಯೆಂದು ತಿಳಿಸಿತ್ತು.ಕದನವಿರಾಮ ಒಪ್ಪಂದವು ತಾಲಿಬಾನ್ ಸಂಘಟಿತರಾಗಲು ನೆರವಾಗುತ್ತದೆಂದು ಅಮೆರಿಕ ಆಕ್ರೋಶ ವ್ಯಕ್ತಪಡಿಸಿತ್ತು.
'ಕದನವಿರಾಮದ ಹಿನ್ನೆಲೆಯಲ್ಲಿ ನಾವು ಎಲ್ಲ ಕೈದಿಗಳನ್ನು ಬೇಷರತ್ ಬಂಧಮುಕ್ತರಾಗಿ ಮಾಡುತ್ತೇವೆ. ಇಂದು ನಾವು ನಾಲ್ಕು ಅರೆಮಿಲಿಟರಿ ಪಡೆಯ ಸೈನಿಕರನ್ನು ಬಿಡುಗಡೆ ಮಾಡಿದ್ದು, ಸದ್ಭಾವನೆಯ ಸಂಕೇತವಾಗಿ ನಮ್ಮ ಸೆರೆಯಲ್ಲಿರುವ ಎಲ್ಲಾ ಭದ್ರತಾಸಿಬ್ಬಂದಿಯನ್ನು ಬಿಡುಗಡೆ ಮಾಡುವುದಾಗಿ' ಫಜಲುಲ್ಲಾ ಖಾನ್ ಹೇಳಿದ್ದಾನೆ.
ಅಕ್ರಮ ಎಫ್ಎಂ ರೇಡಿಯೊ ಜಾಲದ ಮೂಲಕ ತಾಲಿಬಾನ್ ಮುಖಂಡ ಬೆಹತುಲ್ಲಾ ಮೆಹಸೂದ್ ಈ ಪ್ರಕಟಣೆ ಹೊರಡಿಸಿದ್ದು, ಪಾಕಿಸ್ತಾನ ಮತ್ತು ಈ ವಲಯದ ಹಿತಾಸಕ್ತಿ ದೃಷ್ಟಿಯಿಂದ ಕದನವಿರಾಮ ಮುಂದುವರಿಸಿದ್ದಾಗಿ ತಿಳಿಸಿದ್ದಾನೆ. ಕದನವಿರಾಮದ ಗತಿ ಮತ್ತು ಅವಧಿ ಬಗ್ಗೆ ಗೊಂದಲ ಆವರಿಸಿದ್ದ ಹಿನ್ನೆಲೆಯಲ್ಲಿ ತಾಲಿಬಾನ್ ಪ್ರಕಟಣೆ ಹೊರಬಿದ್ದಿದೆ.
ತಾಲಿಬಾನ್ ಹೋರಾಟಗಾರರ ಜತೆ ಕಾಯಂ ಒಪ್ಪಂದಕ್ಕೆ ಅಧಿಕಾರಿಗಳು ಸಮ್ಮತಿಸಿದ್ದಾರೆಂದು ಪಾಕಿಸ್ತಾನ ಹೇಳಿತ್ತು. ಆದರೆ ತಾಲಿಬಾನ್ ದಂಡಾಧಿಕಾರಿಯೊಬ್ಬ ವಿರೋಧಾಭಾಸದ ಹೇಳಿಕೆ ನೀಡಿ ಮುಂದಿನ ವಾರ ಕದನವಿರಾಮ ಒಪ್ಪಂದದ ಪರಾಮರ್ಶೆ ನಡೆಸುವುದಾಗಿ ತಿಳಿಸಿದ್ದರಿಂದ ಕದನವಿರಾಮ ಒಪ್ಪಂದ ಗೊಂದಲದ ಗೂಡಾಗಿತ್ತು.
ಆದಾಗ್ಯೂ, ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗುವಂತೆ ಸರ್ಕಾರ ನೀಡಿದ್ದ ಕರೆಗೆ ತಾಲಿಬಾನ್ ಮೀನಮೇಷ ಎಣಿಸುತ್ತಿರುವುದರಿಂದ ಕದನವಿರಾಮ ಒಪ್ಪಂದದಿಂದ ಸ್ವಾಟ್ ಕಣಿವೆಯಲ್ಲಿ ಶಾಂತಿ ಸ್ಥಾಪನೆ ಕಗ್ಗಂಟಾಗಿಯೇ ಉಳಿದಿದೆ.
|