ಮುಂಬೈ ದಾಳಿಗೆ ಪಾಕಿಸ್ತಾನ ನೆಲದಲ್ಲಿಯೇ ಸಂಚು ರೂಪಿಸಿದ್ದನ್ನು ಒಪ್ಪಿಕೊಂಡಿರುವ ಪಾಕಿಸ್ತಾನ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಬದಲಿಗೆ ಒಂದೊಂದೇ ಖ್ಯಾತೆಗಳನ್ನು ತೆಗೆಯುತ್ತಿದೆ.
ಸಿಕ್ಕಿಬಿದ್ದ ಏಕೈಕ ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಗುರುತಿಸಿದ ಭಯೋತ್ಪಾದನೆ ಸೂತ್ರಧಾರರ ಧ್ವನಿ ಮುದ್ರಿತ ಕರೆಗಳ ವಿವರಗಳನ್ನು ಒಪ್ಪಿಸುವಂತೆ ಪಾಕಿಸ್ತಾನ ಭಾರತಕ್ಕೆ ಕೋರಿದೆ. ಕಸಬ್ ನಿರ್ವಹಣೆಗಾರರು ಎಂದು ಗುರುತಿಸಲಾದ ಅಬು ಹಮ್ಜಾ ಮತ್ತು ಕಾಫಾ ಅವರ ಧ್ವನಿಮುದ್ರಣಗಳಿಗೆ ಕೋರಿಕೆಯು ಪಾಕಿಸ್ತಾನ ಸಲ್ಲಿಸಿದ 30 ಪ್ರಶ್ನೆಗಳಲ್ಲಿ ಒಂದಾಗಿದೆ.
ಭಾರತ ಸಲ್ಲಿಸಿದ್ದ ದಾಖಲೆಗೆ ಪಾಕ್ ಪ್ರತಿಕ್ರಿಯೆಯನ್ನು ಫೆ.12 ರಂದು ಹಸ್ತಾಂತರಿಸಲಾಗಿತ್ತು. ಮೊಬೈಲ್, ಉಪಗ್ರಹ ಫೋನ್‌ಗಳ ವಿಧಿವಿಜ್ಞಾನ ವಿಶ್ಲೇಷಣೆಯ ವರದಿಗಳು, ವಿದೇಶಿ ಮೂಲದ ಉಗ್ರಗಾಮಿಗಳ ಜತೆ ಸಂಪರ್ಕವನ್ನು ದೃಢೀಕರಿಸುವ ಸಾಕ್ಷ್ಯಗಳಿಗೆ ಕೋರಿಕೆ ಈ ಪ್ರಶ್ನೆಗಳಲ್ಲಿ ಸೇರಿವೆ.
ಭಯೋತ್ಪಾದಕರ ನಡುವೆ ಮತ್ತು ಅವರ ಸೂತ್ರಧಾರರ ಧ್ವನಿಮುದ್ರಿತ ಸಂಭಾಷಣೆಗಳ ವಿವರ ಮತ್ತು ಸೆಲ್‌ಫೋನ್ ಕದ್ದಾಲಿಕೆಗಳ ದಾಖಲೆಗಳನ್ನು ಪಾಕಿಸ್ತಾನ ಕೋರಿದೆ. ತುರಾಯಾ ಉಪಗ್ರಹ ಫೋನ್ ಮತ್ತು ಸೆಲ್ ಫೋನ್‌ಗಳ ವಿಧಿವಿಜ್ಞಾನ ವಿಶ್ಲೇಷಣೆ ಕೋರಿದ ಎರಡು ಪ್ರಶ್ನೆಗಳು ಅವುಗಳಲ್ಲಿ ಸೇರಿವೆ.
ಆ ಫೋನ್‌ಗಳ ಮೆಮರಿಯಲ್ಲಿ ಸಂಗ್ರಹವಾದ ಸಂಖ್ಯೆಗಳು ಮತ್ತು ಕರೆ ಮಾಡಿದ ಸಂಖ್ಯೆಗಳ ಬಗ್ಗೆ ಪಾಕಿಸ್ತಾನ ವಿವರಣೆ ಕೋರಿದ್ದು, ಸೆಲ್ ಫೋನ್‌ಗಳಲ್ಲಿ ಸಂಗ್ರಹವಾದ ಛಾಯಾಚಿತ್ರಗಳು ಮತ್ತು ಧ್ವನಿಮುದ್ರಿತ ದಾಖಲೆಗಳನ್ನು ಕೋರಿದೆ.
ಕಸಬ್‌ಗೆ ಸಂಬಂಧಪಟ್ಟಂತೆ ಅವನ ತಪ್ಪೊಪ್ಪಿಗೆ ಹೇಳಿಕೆಯ ದೃಢೀಕೃತ ಪ್ರತಿಯನ್ನು ಅದು ಬಯಸಿದೆ.ದಾಳಿಯಲ್ಲಿ ಅಸುನೀಗಿದ ಇನ್ನುಳಿದ 9 ಭಯೋತ್ಪಾದಕರ ಬಗ್ಗೆ ಕಸಬ್ ನೀಡಿದ ವಿವರಗಳು ಮತ್ತು ಮಾಹಿತಿಗಳಾಗಿ ಪಾಕ್ ಮನವಿ ಮಾಡಿದೆ. |