ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್‌ನಿಂದ ಅಪಹರಣಕ್ಕೀಡಾದ ಕೆನಡಾದ ಪತ್ರಕರ್ತೆ ಅನುಭವಿಸಿದ ಯಾತನೆಯ ವಿವರಗಳು ಬೆಳಕಿಗೆ ಬಂದಿವೆ. ಅವರ ಯಾತನೆಗಳನ್ನು ಚಿತ್ರೀಕರಿಸಿದ ವಿಡಿಯೊಟೇಪ್ ಕೆನಡಾದ ಪ್ರಸಾರ ನಿಗಮದ ಸ್ವಾಧೀನದಲ್ಲಿದೆ.
ವಿಡಿಯೋ ಟೇಪ್‌ನಲ್ಲಿ ತಾವು ತಾಲಿಬಾನ್ ಕೈಗೆ ಸಿಕ್ಕಿಹಾಕಿಕೊಂಡ ಬಗೆಯನ್ನು ಮತ್ತು ತಾವು ಬಂಧಿತರಾದ ಸ್ಥಳದ ಸ್ಥಿತಿಗತಿಯನ್ನು ವಿವರಿಸಿದ್ದಾರೆ. 52 ವರ್ಷ ವಯಸ್ಸಿನ ಬೆವರ್ಲಿ ಗೈಸ್‌ಬ್ರೆಕ್ಟ್ ಖದೀಜಾ ಅಬ್ದುಲ್ ಖಹಾರ್ ಎಂದು ಕೂಡ ಹೆಸರಾಗಿದ್ದು, ಕಳೆದ ನವೆಂಬರ್‌ನಲ್ಲಿ ಅಫ್ಘನ್ ಗಡಿಯಲ್ಲಿರುವ ಪಾಕಿಸ್ತಾನದ ಬನ್ನು ಜಿಲ್ಲೆಯಲ್ಲಿ ಪ್ರಯಾಣಿಸುತ್ತಿದ್ದಾಗ ಬಂದೂಕು ತೋರಿಸಿ ತಾಲಿಬಾನಿಗಳು ಸೆರೆ ಹಿಡಿದಿದ್ದರು.
ಇಸ್ಲಾಮಿಕ್ ಜಗತ್ತಿನ ಪರ್ಯಾಯ ಸುದ್ದಿಗಳನ್ನು ನೀಡುವ ತಮ್ಮ ವೆಬ್‌ಸೈಟ್‌ನ ಸಾಕ್ಷ್ಯಚಿತ್ರಕ್ಕಾಗಿ ಪತ್ರಕರ್ತೆ ಮಾಹಿತಿಗಳನ್ನು ಕಲೆಹಾಕುತ್ತಿದ್ದರು. ತಮ್ಮ ನಾಲ್ಕು ನಿಮಿಷ 43 ಸೆಕೆಂಡುಗಳ ವಿಡಿಯೋ ಪ್ರಸಾರದಲ್ಲಿ ಅಪರೂಪದ ನಾಣ್ಯಸಂಗ್ರಹಕಾರನ ಭೇಟಿಗೆ ತಾವು ಈ ವಲಯಕ್ಕೆ ಎರಡನೇ ಬಾರಿ ತೆರಳಿದ್ದಾಗ ತಾಲಿಬಾನ್ ತಮ್ಮನ್ನು ಅಪಹರಿಸಿತೆಂದು ಅವರು ಹೇಳಿದ್ದಾರೆ.
'ತಾವು ಕಳೆದ 3 ತಿಂಗಳಿಂದ ತಾಲಿಬಾನ್ ಸೆರೆಯಲ್ಲಿದ್ದು, ಮುಸುಕಿದ ಕತ್ತಲೆಯಲ್ಲೇ ಎಚ್ಚರವಾಗಿ ನಂತರ ಕತ್ತಲೆಯಲ್ಲೇ ನಿದ್ರೆಗೆ ಶರಣಾಗುವುದಾಗಿ ಹೇಳಿದ್ದಾರೆ. ತಾವಿರುವ ಸ್ಥಳ ನಿಖರವಾಗಿ ಎಲ್ಲಿದೆಯೆಂದು ಹೇಳಲಾಗದು. ಅಫ್ಘನ್ ಗಡಿಯ ಯಾವುದೋ ಒಂದು ಕಡೆ ನಾನಿದ್ದೇನೆ. ಅಲ್ಲಿ ವಾಯುದಾಳಿ ನಡೆಯುತ್ತಿದ್ದು ತಾವು ಯುದ್ಧವಲಯದಲ್ಲಿರುವುದಾಗಿ' ಅವರು ವಿವರಿಸಿದ್ದಾರೆ. |