ಎಲ್‌ಟಿಟಿಇ ಮುಷ್ಠಿಯಿಂದ ಸುರಕ್ಷಿತ ವಲಯಕ್ಕೆ ಪಲಾಯನ ಮಾಡಿದ ತಮಿಳು ನಾಗರಿಕರು ತಮ್ಮ ಸಂಕಷ್ಟಗಳಿಗೆ ಸ್ವತಃ ಎಲ್‌ಟಿಟಿಇ ಕಾರಣವೆಂದು ಆರೋಪ ಹೊರಿಸಿದ್ದಾರೆ.
ಆದರೆ ಅದೇ ಸಂದರ್ಭದಲ್ಲಿ ಶ್ರೀಲಂಕಾ ಸರ್ಕಾರ ತಮಗೆ ನೀಡಿದ ಸೌಲಭ್ಯಗಳ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಎಲ್‌ಟಿಟಿಇ ಹಿಡಿತದಿಂದ ಬಂಧಮುಕ್ತರಾದ ಬಳಿಕ ಶ್ರೀಲಂಕಾ ಸರ್ಕಾರ ಪುನರ್ವಸತಿ ಕಲ್ಪಿಸಿರುವುದು ಸಂತೋಷದ ವಿಚಾರ. ಆದರೆ ಪುನರ್ವಸತಿ ಶಿಬಿರದಲ್ಲಿ ಪರಿಸ್ಥಿತಿ ನಿಜವಾಗಲೂ ಶೋಚನೀಯವಾಗಿದೆ' ಎಂದು ವಾನ್ನಿಯಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾದ ಪರಮೇಶ್ವರಿ ತಿಳಿಸಿದ್ದಾರೆ.
ಎಲ್‌ಟಿಟಿಇಯ ಮುಂಚಿನ ಸ್ವಯಂಘೋಷಿತ ರಾಜಧಾನಿ ಕಿಲ್ಲಿನೋಚ್ಚಿಯಲ್ಲಿ ತನ್ನ ಬಂಧುಗಳನ್ನು ಮತ್ತು ಸ್ನೇಹಿತರನ್ನು ಕಳೆದುಕೊಂಡ ಆಕೆಗೆ ತಮ್ಮ ಪತಿ ಎಲ್ಲಿದ್ದಾರೆಂಬ ಬಗ್ಗೆ ಅರಿವಿಲ್ಲ. ಕಿಲ್ಲಿನೋಚಿಯಿಂದ ತಾವು ಪತಿ, ಮಕ್ಕಳೊಂದಿಗೆ ತಪ್ಪಿಸಿಕೊಂಡರೂ, ಸೇನೆ ನಿಯಂತ್ರಿತ ಪ್ರದೇಶಕ್ಕೆ ದಾಟಲು ಕಟ್ಟಕಡೆಯವರಾಗಿದ್ದ ಪತಿ ಯತ್ನಿಸುತ್ತಿದ್ದಾಗ, ಎಲ್‌ಟಿಟಿಇ ಕೈಗೆ ಸಿಕ್ಕಿಬಿದ್ದು ವಾನ್ನಿ ಪ್ರದೇಶದಿಂದ ಹೊರಹೋಗುವುದನ್ನು ತಪ್ಪಿಸಿದರು ಎಂದು ಸ್ಥಳಾಂತರಗೊಂಡ ಜನರ ಶಿಬಿರದಲ್ಲಿರುವ ಪರಮೇಶ್ವರಿ ತಿಳಿಸಿದ್ದಾರೆ.
ತಮಿಳು ನಾಗರಿಕರ ಶೋಕಪೂರಿತ ಸಂಕಷ್ಟಕ್ಕೆ ಎಲ್‌ಟಿಟಿಇ ವಿರುದ್ಧ ದೂಷಿಸಿದ ಅವರು,ಬಂಡುಕೋರರು ಅಂತಹ ಪರಿಸ್ಥಿತಿಗೆ ತಮ್ಮನ್ನು ಗುರಿಮಾಡಿದ್ದಾಗಿ ಹೇಳಿದ್ದಾರೆ. 'ತಮ್ಮ ಪತಿ ಜೀವಂತವಾಗಿ ಇದ್ದಾರೆಯೇ ಅಥವಾ ಎಲ್‌ಟಿಟಿಇ ಪರ ಹೋರಾಟಕ್ಕೆ ಬಲವಂತವಾಗಿ ದೂಡಿ ಹತರಾಗಿದ್ದಾರೆಯೇ ಎಂದು ತಮಗೆ ತಿಳಿದಿಲ್ಲ' ಎಂದು ಅವರು ಭಾವಪರವಶತೆಯಿಂದ ನುಡಿದಿದ್ದಾರೆ. |