ಪಾಕಿಸ್ತಾನದ ಪ್ರಕ್ಷುಬ್ಧ ಪೀಡಿತ ಸ್ವಾಟ್ ಕಣಿವೆಯಲ್ಲಿ ತಾಲಿಬಾನಿಗಳು ಭದ್ರತಾಪಡೆಗಳ ಜತೆ ಅನಿರ್ದಿಷ್ಟಾವಧಿ ಕದನವಿರಾಮಕ್ಕೆ ಸಮ್ಮತಿಯ ಮುದ್ರೆ ಒತ್ತಿದ ಬಳಿಕ ಸರ್ಕಾರ 480 ಮಿಲಿಯನ್ ರೂಪಾಯಿ ಆರ್ಥಿಕ ನೆರವು ನೀಡಿರುವ ಸುದ್ದಿ ವರದಿಯಾಗಿದೆ. ಸರಕಾರ ಜತೆ ಶಾಂತಿ ಒಪ್ಪಂದ ಅನುಮೋದಿಸಿ ಶಸ್ತ್ರಾಸ್ತ್ರ ತ್ಯಜಿಸಲು ಉಗ್ರಗಾಮಿಗಳು ಒಪ್ಪಿಕೊಂಡಿದ್ದು, ಧಾರ್ಮಿಕ ತೀವ್ರವಾದಿ ನಾಯಕ ಸೂಫಿ ಮೊಹ್ಮದ್ ಪರಿಹಾರದ ಹಣಕ್ಕೆ ಪ್ರತಿಯಾಗಿ ಷರಿಯತ್ ಕಾನೂನು ಹೇರಲಿದ್ದಾನೆಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ಇಟಲಿ ಸುದ್ದಿಸಂಸ್ಥೆ ತಿಳಿಸಿದೆ. ಈ ಮೊತ್ತವನ್ನು ರಹಸ್ಯವಾಗಿ ಪಾವತಿ ಮಾಡಲಾಗಿದೆ ಎಂದು ಹೆಸರುಹೇಳಲು ಬಯಸದ ಭದ್ರತಾಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಿಲಿಟರಿಕಾರ್ಯಾಚರಣೆಯ ಸಂದರ್ಭದಲ್ಲಿ ಅಸುನೀಗಿದ ಮತ್ತು ಆಸ್ತಿಪಾಸ್ತಿ ಹಾನಿಯಾದವರಿಗೆ ಇದನ್ನು ಪರಿಹಾರರೂಪದಲ್ಲಿ ನೀಡಲಾಗಿದೆ. ಮೌಲಾನಾ ಸೂಫಿ ಮೊಹ್ಮದ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಮುನ್ನವೇ ಈ ಪ್ಯಾಕೇಜ್‌ಗೆ ಅಂತಿಮ ಸ್ವರೂಪ ನೀಡಲಾಯಿತು ಎಂದು ಮೂಲಗಳು ಹೇಳಿವೆ. ಅಧ್ಯಕ್ಷ ಅಸೀಫ್ ಅಲಿ ಜರ್ದಾರಿಯ ವಿಶೇಷ ನಿಧಿಯಿಂದ ಈ ಮೊತ್ತವನ್ನು ರವಾನಿಸಲಾಗಿದೆ.
ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳು ಅಧ್ಯಕ್ಷರ ಅಧಿಕಾರವ್ಯಾಪ್ತಿಯಲ್ಲಿದ್ದು, ಅಧ್ಯಕ್ಷರ ಕಚೇರಿಯಿಂದ ಅಮೆರಿಕದ ಕೊಡುಗೆ ಸೇರಿದಂತೆ ವಿಶೇಷ ನೆರವು ಪ್ಯಾಕೇಜ್ ಈ ಪ್ರದೇಶಕ್ಕೆ ರೂಪಿಸಲಾಗಿದ್ದು, ವಾಯವ್ಯ ಗಡಿ ಪ್ರಾಂತ್ಯದ ಗವರ್ನರ್ಸ್ ಕಚೇರಿಯಿಂದ ವಿತರಿಸಲಾಗುವುದು ಎಂದು ವರದಿ ತಿಳಿಸಿದೆ. |