ಭೂಮಿಯ ಅರ್ಧದಷ್ಟು ದೂರದಲ್ಲಿರುವ ತಮ್ಮ ಸುರಕ್ಷಿತ ಸ್ವರ್ಗದಿಂದ ಅಮೆರಿಕದ ವಿರುದ್ಧ ಸಂಚು ಹೂಡಲು ಭಯೋತ್ಪಾದಕರಿಗೆ ಅವಕಾಶ ನೀಡುವುದಿಲ್ಲ ಎಂದು ಕಟು ಸಂದೇಶವನ್ನು ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಕ್ಕೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ನೀಡಿದ್ದಾರೆ.
ಅಲ್ ಖೈದಾ ಮತ್ತು ತೀವ್ರವಾದದ ದಮನಕ್ಕೆ ಅಮೆರಿಕದ ಮಿತ್ರರಾಷ್ಟ್ರಗಳೊಂದಿಗೆ ಸಮಗ್ರ, ಹೊಸ ಕಾರ್ಯತಂತ್ರ ರೂಪಿಸುವುದಾಗಿ ಅವರು ಆಶ್ವಾಸನೆ ನೀಡಿದರು.
ಕಾಂಗ್ರೆಸ್ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ಒಬಾಮಾ, ತಮ್ಮ ಆಡಳಿತವು ಆಫ್ಘಾನಿಸ್ತಾನ ಮತ್ತು ಇರಾಕ್ ನೀತಿಗಳನ್ನು ಎಚ್ಚರಿಕೆಯಿಂದ ಪರಾಮರ್ಶೆ ಮಾಡುತ್ತಿದ್ದು, ಇರಾಕ್‌ನಲ್ಲಿ ಮುಂದಿನ ದಾರಿಯನ್ನು ಪ್ರಕಟಿಸಿ ಇರಾಕನ್ನು ಅಲ್ಲಿನ ಜನರ ಕೈಗೆ ಒಪ್ಪಿಸಿ ಯುದ್ಧಕ್ಕೆ ಜವಾಬ್ದಾರಿಯ ಮುಕ್ತಾಯ ಹಾಡುವುದಾಗಿ ಅವರು ನುಡಿದರು.
ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ರಾಷ್ಟ್ರವನ್ನು ದುರಾದೃಷ್ಟದ ದಿನದಿಂದ ಭವ್ಯಭವಿಷ್ಯದತ್ತ ಮುನ್ನಡೆಸುವುದಾಗಿ ಅವರು ಭರವಸೆ ನೀಡಿದರು. ಕಠಿಣ ಆಯ್ಕೆಗಳಿಗೆ ಹೆಗಲು ಕೊಟ್ಟು, ತ್ಯಾಗಗಳನ್ನು ಹಂಚಿಕೊಳ್ಳುವಂತೆ ಅವರು ಸಾರ್ವಜನಿಕರು ಮತ್ತು ರಾಜಕಾರಣಿಗಳಿಗೆ ಕರೆ ನೀಡಿದರು. ಭವಿಷ್ಯದ ಕಾರ್ಯಭಾರ ವಹಿಸಿಕೊಳ್ಳುವ ಸಂದರ್ಭವಿದು ಎಂದು ಒಬಾಮಾ ಘೋಷಿಸಿದರು.
ಉದ್ವಿಗ್ನತೆಯಿಂದ ಕೂಡಿದ ರಾಷ್ಟ್ರಕ್ಕ ಮರುಭರವಸೆಯ ನುಡಿಗಳನ್ನು ಉಚ್ಚರಿಸಿದ ಒಬಾಮಾ, ನಾವು ಈ ರಾಷ್ಟ್ರದ ಮರುನಿರ್ಮಾಣ, ಪುನಶ್ಚೇತನ ಮಾಡಿ ಮುಂಚಿಗಿಂತ ಅಮೆರಿಕ ಸಂಯುಕ್ತ ಸಂಸ್ಥಾನ ಬಲಶಾಲಿಯಾಗಿ ಹೊಮ್ಮುತ್ತದೆಂದು ಪ್ರತಿಯೊಬ್ಬ ಅಮೆರಿಕನ್ ಪ್ರಜೆ ತಿಳಿದರಲಿ ಎಂದು ಆಶಾವಾದಿಯಾಗಿ ನುಡಿದರು. |