ಎಲ್‌ಟಿಟಿಇ ಮತ್ತು ಶ್ರೀಲಂಕಾ ಮಿಲಿಟರಿ ನಡುವೆ ಕದನ ನಿರ್ಣಾಯಕ ಘಟ್ಟವನ್ನು ಮುಟ್ಟಿದ್ದು, ಲಂಕಾದ ಪಡೆಗಳು ತಮಿಳು ವ್ಯಾಘ್ರಗಳ ಹಿಡಿತದಲ್ಲಿರುವ ಕಟ್ಟಕಡೆಯ ಪಟ್ಟಣವನ್ನು ಪ್ರವೇಶಿಸಿದೆ.
ಯುದ್ಧವು ಕೊನೆಯ ಹಂತಕ್ಕೆ ತಲುಪಿದೆಯೆಂದು ಸರಕಾರ ಹೇಳಿದ್ದು, ಸಂಘರ್ಷಪೀಡಿತ ವಲಯದಿಂದ ನಾಗರಿಕರು ತಪ್ಪಿಸಿಕೊಳ್ಳಲು ಕದನವಿರಾಮ ಘೋಷಿಸಬೇಕೆಂಬ ಅಂತಾರಾಷ್ಟ್ರೀಯ ಸಮುದಾಯದ ಕರೆಯನ್ನು ತಿರಸ್ಕರಿಸಿದೆ.
ಎಲ್‌ಟಿಟಿಇ ಜತೆ ಕದನವಿರಾಮಕ್ಕೆ ಅಂತಾರಾಷ್ಟ್ರೀಯ ಒತ್ತಡವಿದೆಯೆಂದು ಒಪ್ಪಿಕೊಂಡ ಸರಕಾರ, ಬಂಡುಕೋರರು ಸೋಲಿನ ಅಂಚಿನಲ್ಲಿದ್ದು, ಕದನವಿರಾಮ ಕರೆಗಳಿಗೆ ತಾನು ತಲೆಬಾಗುವುದಿಲ್ಲ ಎಂದು ತಿಳಿಸಿದೆ. ತಾವು ಕದನವಿರಾಮಕ್ಕೆ ಸಿದ್ಧವಿಲ್ಲ. ಭಯೋತ್ಪಾದನೆ ವಿರುದ್ಧ ಸಮರ ಕೊನೆಯ ಹಂತದಲ್ಲಿದೆ ಎಂದು ಪ್ರಧಾನಮಂತ್ರಿ ರತ್ನಸಿರಿ ವಿಕ್ರಮನಾಯಕೆ ಕೊಲಂಬೊನಲ್ಲಿ ತಿಳಿಸಿದರು.
'ಕದನವಿರಾಮ ಒಪ್ಪಂದ ಮಾಡಿಕೊಳ್ಳುವಂತೆ ಕೆಲವು ರಾಷ್ಟ್ರಗಳು ನಮಗೆ ಒತ್ತಡ ಹೇರುತ್ತಿವೆ. ಶ್ರೀಲಂಕಾ ವಸಾಹತುಶಾಹಿ ರಾಷ್ಟ್ರವಾಗಿದ್ದು ತಾವು ಹೇಳಿದ್ದಕ್ಕೆ ಬದ್ಧವಾಗಿರುತ್ತದೆಂ ದು ಅವು ಭಾವಿಸಿವೆ' ಎಂದು ಅವರು ನುಡಿದರು.ಶ್ರೀಲಂಕಾ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಜನರ ಇಚ್ಛೆ ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ನೀತಿಗಳನ್ನು ರೂಪಿಸಲಾಗುತ್ತದೆ ಮತ್ತು ರಾಷ್ಟ್ರದ ಸಾರ್ವಬೌಮತೆಯನ್ನು ಗೌರವಿಸಬೇಕು ಎಂದು ವಿಕ್ರಮನಾಯಕೆ ಹೇಳಿದರು. |