ಪಿಲ್ಕಾನಾ ಪ್ರದೇಶದಲ್ಲಿರುವ ಅರೆ ಮಿಲಿಟರಿ ಬಾಂಗ್ಲಾದೇಶ ರೈಫಲ್ಸ್ ಮುಖ್ಯಕಚೇರಿಯಲ್ಲಿ ಬಂಡಾಯ ಭುಗಿಲೆದ್ದಿದ್ದು, ಮುಖ್ಯ ಬ್ಯಾರಕ್‌ಗಳಲ್ಲಿ ಪಡೆಗಳ ನಡುವೆ ಭಾರೀ ಗುಂಡಿನ ಕಾಳಗ ನಡೆದಿದ್ದು, ಹಲವು ಅಧಿಕಾರಿಗಳು, ಸೈನಿಕರು ಸಾವನ್ನಪ್ಪಿರುವುದಾಗಿ ಪ್ರತ್ಯಕ್ಷದರ್ಶಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಸೇನೆಯಲ್ಲಿ ವಿವಿಧ ಸೌಲಭ್ಯಗಳಿಗೆ ಆಗ್ರಹಿಸಿ ಇಂದು ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಸರಕಾರದ ವಿರುದ್ದ ಬಂಡಾಯ ಸಾರಿದ್ದಾರೆ.
ಗುಂಡಿನ ಚಕಮಕಿಯಲ್ಲಿ ಸುಮಾರು 20 ಜನರು ಸತ್ತಿರಬಹುದೆಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ. ಬಂಡಾಯವನ್ನು ಹತ್ತಿಕ್ಕಲು ಸೇನೆಯನ್ನು ಕರೆಸಲಾಗಿದ್ದು, ಮಿಲಿಟರಿ ಬೆಂಗಾವಲು ವಾಹನಗಳ ಚಲನವಲನ ಮತ್ತು ವಾಯುಪಡೆ ಹೆಲಿಕಾಪ್ಟರ್‌ಗಳು ಪಿಲ್ಕಾನಾ ಶಿಬಿರಗಳ ಮೇಲೆ ಹಾರಾಡುವುದು ಕಂಡುಬಂದಿದೆಯೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಂಕೀರ್ಣದಿಂದ ದಟ್ಟವಾದ ಹೊಗೆ ಆವರಿಸಿದ್ದು, ಭದ್ರತಾಪಡೆಗಳು ಆ ಪ್ರದೇಶವನ್ನು ನಿರ್ಬಂಧಿಸಿದೆ. ಭಾರೀ ಗುಂಡಿನ ಚಕಮಕಿಗಳು ನಡೆಯುತ್ತಿರುವ ಬ್ಯಾರಕ್‌ನೊಳಗೆ ಪ್ರವೇಶಿಸಲು ಸೇನಾಪಡೆಗಳು ಯೋಜನೆ ರೂಪಿಸುತ್ತಿವೆ ಎಂದು ಸೇನೆಯ ಮೂಲವೊಂದು ತಿಳಿಸಿದ್ದು, ಬಿಡಿಆರ್ ಮುಖ್ಯಕಚೇರಿಯ ಒಳಗೆ ಅಧಿಕಾರಿಗಳನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲವೆಂದು ತಿಳಿಸಿದೆ.
ಬಿಡಿಆರ್ ಪ್ರಧಾನ ನಿರ್ದೇಶಕರಿಗೆ ಗುಂಡಿಕ್ಕಲಾಗಿದೆ ಎಂದು ದೃಢಪಡದ ವರದಿಯೊಂದು ತಿಳಿಸಿದೆ. ಅವರ ಸ್ಥಿತಿಗತಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ ಮತ್ತು ಗುಂಡಿನಚಕಮಕಿಗೆ ಕಾರಣಗಳು ತಿಳಿದುಬಂದಿಲ್ಲ.
ಬಿಡಿಆರ್ ಶಿಬಿರದ ಬಳಿ ಹಾದುಹೋಗುತ್ತಿದ್ದ ಕನಿಷ್ಠ ಇಬ್ಬರು ದಾರಿಹೋಕರಿಗೆ ಗುಂಡೇಟು ತಗುಲಿದ್ದು ಅವರನ್ನು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ಈ ಪ್ರದೇಶದ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದಾರೆ. ಬಂಡಾಯ ಭುಗಿಲೆದ್ದ ಬಳಿಕ ಅನೇಕ ಸಾವುನೋವು ಸಂಭವಿಸಿದೆ ಎಂದು ಶಿಬಿರದೊಳಗಿರುವ ಬಿಡಿಆರ್ ಸೈನಿಕರ ಬಂಧುಗಳು ಹೇಳಿದ್ದಾರೆ.
|