ರಾಷ್ಟ್ರದ ದೊಡ್ಡ ಪ್ರತಿಪಕ್ಷದ ನೇತೃತ್ವ ವಹಿಸಿರುವ ಮಾಜಿ ಪ್ರಧಾನಮಂತ್ರಿ ನವಾಜ್ ಷರೀಪ್ ಮತ್ತು ಅವರ ಸೋದರ ಶಾಬಾಜ್ ಷರೀಫ್ ಚುನಾವಣೆಗಳಲ್ಲಿ ಸ್ಪರ್ಧಿಸುವುದರಿಂದ ಪಾಕಿಸ್ತಾನ ಸುಪ್ರೀಂಕೋರ್ಟ್ ಬುಧವಾರ ಅನರ್ಹಗೊಳಿಸಿದೆ. ಎಲ್ಲ ಮನವಿಗಳನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ ಎಂದು ಹಿರಿಯ ವಕೀಲ ಅಕ್ರಮ್ ಶೇಖ್ ಕೋರ್ಟ್ ಹೊರಗೆ ವರದಿಗಾರರಿಗೆ ತಿಳಿಸಿದರು. ಲಾಹೋರ್‌ನ ಕೋರ್ಟ್‌ವೊಂದು ನವಾಜ್ ಷರೀಫ್ ಅವರಿಗೆ ಮುಂಚಿನ ಕ್ರಿಮಿನಲ್ ದಂಡನೆಯ ಹಿನ್ನೆಲೆಯಲ್ಲಿ ಉಪಚುನಾವಣೆಗೆ ಸ್ಪರ್ಧಿಸಲು ಅನರ್ಹರೆಂದು ತೀರ್ಪು ನೀಡಿತ್ತು. ಷರೀಫ್ ಅವರು ಮುಷರಫ್ ಮೈತ್ರಿಕೂಟವನ್ನು ಸೋಲಿಸಲು ಪ್ರಮುಖ ಪಾತ್ರ ವಹಿಸಿದ ಬಳಿಕ ಪ್ರಸಕ್ತ ಪಾಕಿಸ್ತಾನ ಸರ್ಕಾರ ಈ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿತು. ಬುಧವಾರದ ಕೋರ್ಟ್ ತೀರ್ಪಿನಿಂದ ಪಂಜಾಬ್ ಮುಖ್ಯಮಂತ್ರಿಯಾಗಿರುವ ಶಾಬಾಜ್ ಷರೀಫ್ ಪ್ರಾಂತೀಯ ಸಂಸತ್ತಿಗೆ ರಾಜೀನಾಮೆ ನೀಡಿ ಹುದ್ದೆಯಿಂದ ಕೆಳಕ್ಕಿಳಿಯಬೇಕಾಗಿದೆ. ನವಾಜ್ ಷರೀಪ್ ಪಾಕಿಸ್ತಾನ ಮುಸ್ಲೀಂ ಲೀಗ್-ಎನ್ ಮುಖ್ಯಸ್ಥರಾಗಿದ್ದು, ಯಾವುದೇ ಸಂಸತ್ತಿನ ಸ್ಥಾನವನ್ನು ಹೊಂದಿಲ್ಲ. |