ನ್ಯೂಜಿಲೆಂಡ್‌ನ ಇನ್ವರ್‌ಕಾರ್ಗಿಲ್ ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ಜನಾಂಗೀಯ ನಿಂದನೆಗೆ ಗುರಿಯಾಗಿದ್ದು, ಸ್ಥಳೀಯ ಜನರು ಅವರನ್ನು ಭಯೋತ್ಪಾದಕರೆಂದು ಕರೆಯುತ್ತಿದ್ದಾರೆಂದು ಪತ್ರಿಕೆಯೊಂದು ವರದಿ ಮಾಡಿದೆ.
ತಲೆಗೆ ಪೇಟ ಧರಿಸುವ ಸಿಖ್ಖರು ಜನಾಂಗೀಯ ನಿಂದನೆಗೆ ಗುರಿಯಾಗಿದ್ದು, ಅವರನ್ನು ಅರಬ್ ಅಥವಾ ಮುಸ್ಲಿಮರೆಂದು ಕೆಲವು ಅಜ್ಞಾನಿಗಳು ಭಾವಿಸಿದ್ದಾರೆಂದು ಪತ್ರಿಕೆ ವರದಿ ಮಾಡಿದೆ. ಜಸ್ದೀಪ್ ಸಿಂಗ್ ಎಂಬ ಸಿಖ್ ಯುವಕನೊಬ್ಬ ತನ್ನ ಸುರಕ್ಷತೆಯ ದೃಷ್ಟಿಯಿಂದ ಧಾರ್ಮಿಕ ಕಟ್ಟಳೆಗಳನ್ನು ತ್ಯಜಿಸಿ ಪೇಟ ಹಾಕುವುದನ್ನು ತಪ್ಪಿಸಲು ಕ್ಷೌರ ಕೂಡ ಮಾಡಿಸಿಕೊಂಡಿರುವುದಾಗಿ ಪತ್ರಿಕೆಗೆ ತಿಳಿಸಿದ್ದಾನೆ.
ಪೋಷಕರಿಗೆ ಈ ವಿಷಯ ತಿಳಿದರೆ ತೀವ್ರ ಆಘಾತವುಂಟಾಗಿ ಆಕ್ರೋಶಿತರಾಗುವರೆಂದೂ ಅವನು ಹೇಳಿದ್ದಾನೆ. 25 ಮಂದಿ ಗುಂಪಿನಲ್ಲಿ ಐವರು ವಿದ್ಯಾರ್ಥಿಗಳು ಸದರನ್ ತಾಂತ್ರಿಕ ಸಂಸ್ಥೆಯಲ್ಲಿ ಅಧ್ಯಯನಕ್ಕೆ ಆಗಮಿಸಿದ್ದು, ಕಳೆದ 12 ದಿನಗಳಲ್ಲಿ 16 ಜನಾಂಗೀಯ ನಿಂದನೆ ಘಟನೆಗಳನ್ನು ಅನುಭವಿಸಿದ್ದಾಗಿ ತಿಳಿಸಿದ್ದಾರೆ.
ಮಹಿಳೆ ಮತ್ತು ಪುರುಷರಿಂದ ಕೂಡಿದ ಜನಾಂಗೀಯ ನಿಂದಕರು 20 ಹರೆಯದಲ್ಲಿದ್ದು, ದೇಶವನ್ನು ಬಿಟ್ಟು ಹೋಗುವಂತೆ ಒತ್ತಾಯಿಸುವುದು ಸೇರಿದಂತೆ ಅನೇಕ ರೀತಿಯ ಕಿರುಕುಳ ನೀಡುತ್ತಿದ್ದಾರೆಂದು ಜಸ್ಮೈಲ್ ಸಿಂಗ್ ಹೇಳಿದ್ದು, ಕತ್ತಲೆ ಕವಿದ ಬಳಿಕ ರಸ್ತೆಯಲ್ಲಿ ಸಂಚಾರ ನಿಲ್ಲಿಸಿದ್ದಾಗಿ ಹೇಳಿದ್ದಾರೆ. |